ಮಂಗಳೂರು : ಆನ್ ಲೈನ್ ಮೂಲಕ ಕೆಲಸ ಮಾಡುವ ಪಾರ್ಟ್ ಟೈಮ್ ಜಾಬ್ ಕೊಡಿಸುತ್ತೇವೆಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 1,65,800 ಲಕ್ಷ ಹಣ ವಂಚನೆ ಎಸಗಿರುವ ಬಗ್ಗೆ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರು ನಗರದ ನಿವಾಸಿಯೊಬ್ಬರ ವಾಟ್ಸ್ಆ್ಯಪ್ ಗೆ ಅಪರಿಚಿತನೋರ್ವನು ಜುಲೈ 5ರಂದು 1(626)4772787 ಸಂಖ್ಯೆಯಿಂದ ಆನ್ ಲೈನ್ ಪಾರ್ಟ್ ಟೈಮ್ ಜಾಬ್ ಬಗ್ಗೆ ಮೆಸೇಜ್ ರವಾನಿಸಿದ್ದಾನೆ. ಇದನ್ನು ನಂಬಿದ ದೂರುದಾರ ವ್ಯಕ್ತಿ ಆನ್ ಲೈನ್ ಕೆಲಸದ ಬಗ್ಗೆ ವಿಚಾರಿಸುವ ಉದ್ದೇಶದಿಂದ ಸಂದೇಶಕ್ಕೆ ಉತ್ತರಿಸಿದ್ದಾರೆ. ಆಗ ಅಪರಿಚಿತ ಗೂಗಲ್ ಮ್ಯಾಪ್ ಮೂಲಕ ಕೆಲಸ ಮಾಡುವ ಬಗ್ಗೆ J-The New Generation ಎಂಬ ಟೆಲಿಗ್ರಾಂ ಗ್ರೂಪ್ ಗೆ ಸೇರಿಸಿ ಅದರಲ್ಲಿ ಪ್ರಿಪೇಡ್ ಟಾಸ್ಕ್ ಆಡಬೇಕೆಂದು ತಿಳಿಸಿದ್ದರು. ಮೊದಲಿಗೆ 150 ರೂಪಾಯಿ ಹಣವನ್ನು ದೂರುದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಹೇಳಿದ್ದಾನೆ. ಹೀಗೆ ದೂರುದಾರರು ಹೂಡಿಕೆ ಮಾಡಿದ ಕೆಲವು ಮೊತ್ತಗಳಿಗೆ ಅತ್ತಕಡೆಯಿಂದ ಹೆಚ್ಚಿನ ಹಣವನ್ನು ಅವರ ಖಾತೆಗೆ ವರ್ಗಾಯಿಸುತ್ತಿದ್ದರು. ಉತ್ತೇಜಿತರಾದ ದೂರುದಾರರು ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುವುದೆಂದು ನಂಬಿ ತನ್ನ ಬ್ಯಾಂಕ್ ಖಾತೆಯಿಂದ ಅಪರಿಚಿತ ಕಳುಹಿಸಿಕೊಟ್ಟ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 1,65,800/-ರೂ. ಹಣವನ್ನು ವರ್ಗಾಯಿಸಿದ್ದಾರೆ. ಆದರೆ ಆ ಬಳಿಕ ಹಣ ಪಾವತಿಯಾಗಲೇ ಇಲ್ಲ. ಇದರಿಂದ ಮೋಸದ ಅರಿವಾಗಿ ಹಣ ಕಳೆದುಕೊಂಡ ವ್ಯಕ್ತಿ ಆನ್ ಲೈನ್ ವಂಚನೆ ಬಗ್ಗೆ ಮಂಗಳೂರು ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.