ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಮುಲ್ಕಿ ಅಂಗಡಿಯಲ್ಲಿ ನಗದು ಹಾಗೂ ಸೊತ್ತುಗಳನ್ನು ಕದ್ದೊಯ್ದು ತಿಂದು ತೇಗಿದ್ದ ಕಳ್ಳರನ್ನು ಬಂಧಿಸುವಲ್ಲಿ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರ ತಂಡವು ಯಶಸ್ವಿಯಾಗಿದೆ.
ನೀರುಡೆಯ ರೋಹಿತ್ ಮಸ್ಕರೇನಸ್, ಕೊಂಪದವು ನೆಲ್ಲಿತೀರ್ಥದ ನಿಶಾಂಕ್ ಪೂಜಾರಿ ಹಾಗೂ ನೀರುಡೆಯ ರೋಶನ್ ವಿಲ್ಸನ್ ಕ್ವಾಡ್ರಸ್ ಬಂಧಿತ ಆರೋಪಿಗಳು.
ಕಳೆದ 9 ನೇ ತಾರೀಕಿನಂದು ರಾತ್ರಿ ಪುತ್ತಿಗೆಯ ಜಯಶ್ರೀ ಸ್ಟೋರ್ ನಿಂದ ರೂ.20 ಸಾವಿರ ನಗದು ಹಾಗೂ ಸುಮಾರು 48 ಸಾವಿರ ರೂ.ಮೌಲ್ಯದ ಸಿಗರೇಟು, ತಿಂಡಿ. ನೀರಿನ ಬಾಟಲ್, ಕೋಲ್ಡ್ ಡ್ರಿಂಕ್ಸ್, ಚಾಕೊಲೆಟ್, ಬಿಸ್ಕೆಟ್, ಮಿಕ್ಸರ್ ಇತ್ಯಾದಿ ತಿಂಡಿಗಳನ್ನು ಯಾರೋ ಕಳ್ಳರು ದೋಚಿದ್ದ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು ಕೋಲ್ಡ್ ಡ್ರಿಂಕ್ಸ್ ನೊಂದಿಗೆ ಬಿಸ್ಕೆಟ್ ತಿಂದಿದ್ದ ಮೂವರು ಸಿಕ್ಕಿಬಿದ್ದಿದ್ದಾರೆ.
ಈ ಮೂವರ ತಂಡ ವೇಣೂರು,ಮುಲ್ಕಿ,ಬಜ್ಪೆ ಹಾಗೂ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಸುಮಾರು 25 ಕ್ಕೂ ಹೆಚ್ಚು ಗೂಡಂಗಡಿಗಳಿಂದ ಕಳವುಗೈದಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ನೇತೃತ್ವದಲ್ಲಿ ಎಸ್.ಐ.ನವೀನ್, ಎ.ಎಸ್.ಐ. ರಾಜೇಶ್, ಕ್ರೈಮ್ ವಿಭಾಗದ ಸಿಬ್ಬಂದಿಗಳಾದ ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಹುಸೈನ್, ಅಕಿಲ್ ಅಹ್ಮದ್,ನಾಗರಾಜ್ ,ಪ್ರದೀಪ್, ವೆಂಕಟೇಶ್, ಸತೀಶ್ ಹಾಗೂ ರಾಜೇಶ್ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.