ಮದುವೆ ಸಮಾರಂಭದಲ್ಲಿ ಊಟ ಸೇವಿಸಿದ್ದ 100ಕ್ಕೂ ಹೆಚ್ಚು ಜನರಿಗೆ ವಾಂತಿ ಬೇಧಿಯಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೋಮವಾರ ಚಿಕ್ಕೋಡಿಯ ಹಿರೇಕೋಡಿ ಹೊರವಲಯದಲ್ಲಿ ನಡೆದಿದೆ.
ಸೋಮವಾರ ಹಿರೇಕೋಡಿ ಹೊರವಲಯದಲ್ಲಿ ಪಟೇಲ್ ಕುಟುಂಬದ ಮದುವೆ ನಡೆಯಿತು. ಅಲ್ಲಿ ಮಾಂಸಾಹಾರ ಹಾಗೂ ಸಸ್ಯಾಹಾರ ಊಟವನ್ನು ತಯಾರು ಮಾಡಲಾಗಿತ್ತು. ಮಾಂಸಾಹಾರ ಸೇವಿಸಿದ 100ಕ್ಕೂ ಅಧಿಕ ಮಂದಿ ವಾಂತಿ-ಬೇಧಿಯಾಗಿ ಅಸ್ವಸ್ಥಗೊಂಡಿದ್ದಾರೆ. ಇನ್ನು ಮದುವೆ ಸಮಾರಂಭಕ್ಕೆ ಮಹಾರಾಷ್ಟ್ರದ ಮಿರಜ್‌ನಿಂದಲೂ ಸಂಬಂಧಿಕರು ಆಗಮಿಸಿದ್ದರು. ಮಿರಜ್‌ನಿಂದ ಆಗಮಿಸಿದವರಿಗೂ ವಾಂತಿ ಭೇದಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಸಿಕ್ಕಿದೆ.
ಇನ್ನು ಈ ಘಟನೆ ಸಂಬಂಧ ಹಿರೇಕೋಡಿಯಲ್ಲಿ ಡಿಎಚ್‌ಒ ಡಾ.ಸುಕುಮಾರ್ ಭಾಗಾಯಿ ಮಾತನಾಡಿ, ಮದುವೆ ಊಟ ಮಾಡಿ ಮನೆಗೆ ಬಂದವರಿಗೆ ತಡರಾತ್ರಿ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿದ್ದು ಅನೇಕರು ರಾತ್ರಿಯೇ ತಮ್ಮ ಗ್ರಾಮದ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ತೀವ್ರ ಅಸ್ವಸ್ಥಗೊಂಡವರನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗುತ್ತಿದೆ.
ಐವರು ವೈದ್ಯರು, 15 ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಮದುವೆಯಲ್ಲಿ ಊಟ ಮಾಡಿದ ಬಳಿಕ ಸಂಜೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ಮದುವೆ ಸಮಾರಂಭದಲ್ಲಿ ನೀಡಿದ ಆಹಾರದ ಸ್ಯಾಂಪಲ್ ಪಡೆದು ಪರೀಕ್ಷೆ ಮಾಡುತ್ತೇವೆ. ಯಾವುದೇ ರೋಗಿಗಳಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.