ಮಂಗಳೂರು: ಇನ್‌ಸ್ಟಾಗ್ರಾಂ ಪುಟವೊಂದರಲ್ಲಿ ಪೊಲೀಸ್ ಇಲಾಖೆಯ ವಿರುದ್ಧ ಸುಳ್ಳು ಆರೋಪ ಹೊರಿಸಿ, ಪ್ರಚೋದನಕಾರಿ ಸಂದೇಶ ಹರಿಬಿಟ್ಟಿದ್ದ ಆರೋಪಿಯನ್ನು ಮಂಗಳೂರು ನಗರ ಸಿ.ಇ.ಎನ್ (CEN) ಪೊಲೀಸರು ಬಂಧಿಸಿದ್ದಾರೆ.
ಕಾಟಿಪಳ್ಳ ನಿವಾಸಿ ಅಭಿಷೇಕ್ ಎಂ. (23) ಬಂಧಿತ ಆರೋಪಿ. ಈತ ಈ ಹಿಂದೆ ಕೊಲೆ, ಕೊಲೆಯತ್ನ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಳೆ ಆರೋಪಿಯಾಗಿದ್ದಾನೆ.
ಬಂಧಿತ ಆರೋಪಿ ಅಭಿಷೇಕ್ ‘mr_a_titude’ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಬಜ್ಪೆಯ ಹೋಟೆಲ್ ನಿಸರ್ಗದ ಫೋಟೋವನ್ನು ಹಂಚಿಕೊಂಡಿದ್ದ. ಅದರೊಂದಿಗೆ, “ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳಿಗೆ ಪೊಲೀಸರು ರಾಜಾತಿಥ್ಯ ನೀಡುತ್ತಿದ್ದಾರೆ. ಪ್ರತಿದಿನ ನಿಸರ್ಗ ಹೋಟೆಲ್‌ನಿಂದ ಬೀಫ್ ಊಟ ತರಿಸಿ ಕೊಡುತ್ತಿದ್ದಾರೆ. ರಕ್ಷಣೆ ಮಾಡಬೇಕಾದ ಇಲಾಖೆಯೇ ಅಪರಾಧಿಗಳ ಜೊತೆ ಕೈಜೋಡಿಸಿದೆ” ಎಂಬ ಆಧಾರರಹಿತ ಮತ್ತು ಪ್ರಚೋದನಕಾರಿ ಬರಹವನ್ನು ಪೋಸ್ಟ್ ಮಾಡಿದ್ದ.
ಪೊಲೀಸ್ ಇಲಾಖೆಯ ಘನತೆಗೆ ಕುಂದು ತರುವ ಮತ್ತು ಸಾರ್ವಜನಿಕರಲ್ಲಿ ತಪ್ಪು ಸಂದೇಶ ರವಾನಿಸುವ ಈ ಕೃತ್ಯದ ವಿರುದ್ಧ ಮೇ 8ರಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಸಿ.ಇ.ಎನ್ ವಿಭಾಗದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈತನ ಮೇಲೆ ಈಗಾಗಲೇ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ.
ಸುರತ್ಕಲ್ ಪೊಲೀಸ್ ಠಾಣೆ: ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ 3 ಪ್ರಕರಣಗಳು.
ಕಾಪು ಪೊಲೀಸ್ ಠಾಣೆ: ಹಲ್ಲೆಗೆ ಸಂಬಂಧಿಸಿದ 1 ಪ್ರಕರಣ ದಾಖಲಾಗಿದೆ.




