ಸುರತ್ಕಲ್: ಎಂಆರ್‌ಪಿಎಲ್ ಸ್ಥಾವರದಲ್ಲಿ ಶನಿವಾರ ಸಂಭವಿಸಿದ ದುರಂತದಲ್ಲಿ ಮೃತಪಟ್ಟಿರುವ ಕಾರ್ಮಿಕ ದೀಪ್‌ಚಂದ್ರ ಬಾರ್ತಿಯ ಅವರ ಪತ್ನಿ ನೀಡಿದ ದೂರಿನ ಮೇರೆಗೆ ಎಂಆರ್‌ಪಿಎಲ್‌ನ 6 ಮಂದಿ ಆಧಿಕಾರಿಗಳ ವಿರುದ್ಧ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅನಿಲ ಸೋರಿಕೆ ಕುರಿತಂತೆ ಪರಿಶೀಲಿಸಲು ತೆರಳಿದ್ದಾಗ ದೀಪ್‌ಚಂದ್ರ ಬಾರ್ತಿಯ ಹಾಗೂ ಇಜಿಲ್ ಪ್ರಸಾದ್ ಗ್ಯಾಸ್‌ನ ಘಾಟು ವಾಸನೆಗೆ ಉಸಿರುಗಟ್ಟಿ ಮೃತಪಟ್ಟಿದ್ದರು. ಸುರತ್ಕಲ್ ಉಪತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದು ಜಿಲ್ಲಾಧಿಕಾರಿಗಳಿಗೆ ಪ್ರಥಮ ಮಾಹಿತಿ ನೀಡಿದ್ದಾರೆ.
ಮೃತ ಕಾರ್ಮಿಕ ದೀಪ್‌ಚಂದ್ರ ಬಾರ್ತಿಯ ಅವರ ಮೃತದೇಹವನ್ನು ಅವರ ಊರಾದ ಉತ್ತರಪ್ರದೇಶದ ಪ್ರಯಾಗ್ ರಾಜ್ ಗೆ ತೆಗೆದುಕೊಂಡು ಹೋದ ಸಹೋದ್ಯೋಗಿಗಳಿಗೆ ಮೃತನ ಸಂಬಂಧಿಕರು ದಿಗ್ಬಂಧನ ವಿಧಿಸಿದ್ದಾರೆ. ಸಾವಿಗೆ ಸಂಬಂಧಪಟ್ಟಂತೆ ಎಂಆರ್‌ಪಿಎಲ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡಬೇಕು. ಪರಿಹಾರದ ಬೇಡಿಕೆಯನ್ನು ಈಡೇರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ




