ಪಾವಂಜೆ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಸಮೀಪದ ಪಾವಂಜೆ ಜಂಕ್ಷನ್ ಬಳಿ ಮೂಡಬಿದ್ರೆ ಪುತ್ತಿಗೆ ಬಳಿಯ ಅನ್ಯಕೋಮಿನ ಯುವಕನ ಜೊತೆಗೆ ಅಪ್ರಾಪ್ತೆ ಶಾಲಾ ವಿದ್ಯಾರ್ಥಿನಿ ಪತ್ತೆಯಾಗಿದ್ದು, ಸಂಶಯ ಬಂದ ಹಿಂದೂ ಸಂಘಟನೆಯ ಯುವಕರು ಇಬ್ಬರನ್ನೂ ಮುಲ್ಕಿ ಪೊಲೀಸರಿಗೆ ಒಪ್ಪಿಸಿದ್ದು, ಯುವಕನ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಳೆಯಂಗಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಅನ್ಯಕೋಮಿನ ಯುವಕ ಮೂಡಬಿದ್ರೆ ಪುತ್ತಿಗೆ ನಿವಾಸಿ ತೌಫೀಕ್ (26) ಎಂಬಾತ ಮೂಡಬಿದ್ರೆಯ ಶಾಲೆಯಲ್ಲಿ ಕಲಿಯುತ್ತಿದ್ದ ಅಪ್ರಾಪ್ತೆ ಶಾಲಾ ವಿದ್ಯಾರ್ಥಿನಿಯನ್ನು ತನ್ನ ದ್ವಿಚಕ್ರವಾಹನದಲ್ಲಿ ಕುಳ್ಳಿರಿಸಿ ಹೋಗುತ್ತಿದ್ದಾಗ ಪಾವಂಜೆ ಜಂಕ್ಷನ್ ಬಳಿ ತಪಾಸಣೆ ನಡೆಸುತ್ತಿದ್ದ, ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಸಂಶಯದಿಂದ ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿದಾಗ ನಂಬರ್ ಪ್ಲೇಟ್ ಇಲ್ಲದೆ ದ್ವಿಚಕ್ರವಾಹನ ಓಡಿಸುತ್ತಿರುವ ಬಗ್ಗೆ ಯುವಕನಿಗೆ ದಂಡ ವಿಧಿಸಿದ್ದಾರೆ.
ಈ ಸಂದರ್ಭ ಯುವಕ ತೌಫಿಕ್ ತನ್ನ ಹತ್ತಿರ ಹಣ ಇಲ್ಲ ಎಂದು ಪೊಲೀಸರಲ್ಲಿ ಹೇಳಿ ಪಾವಂಜೆ ಹೆದ್ದಾರಿ ಬದಿಯ ಎಟಿಎಂ ಕಡೆಗೆ ಹೋಗಿದ್ದಾನೆ. ಆಗ ಸ್ಥಳದಲ್ಲಿದ್ದ ಹಿಂದೂ ಸಂಘಟನೆಯ ಯುವಕರು ಸಂಶಯದಿಂದ ಆತನ ಬಗ್ಗೆ ಹಾಗೂ ಬುರ್ಖಾ ಧರಿಸಿದ ಶಾಲಾ ವಿದ್ಯಾರ್ಥಿನಿಯಲ್ಲಿ ಪ್ರಶ್ನಿಸಿದಾಗ ಹುಡುಗಿ ಫಾತಿಮಾ ಎಂದು ಹೆಸರು ಹೇಳಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ.
ಕೂಡಲೇ ಸಂಘಟನೆ ಯುವಕರು ಕಾರ್ಯಪ್ರವೃತ್ತರಾಗಿ ಪರಿಶೀಲಿಸಿದಾಗ ವಿದ್ಯಾರ್ಥಿನಿ ಬ್ಯಾಗ್ ನಲ್ಲಿ ಕೂಡ ಬುರ್ಖಾ ಬಟ್ಟೆ ಪತ್ತೆಯಾಗಿದೆ. ಕೂಡಲೇ ಹಿಂದೂ ಸಂಘಟನೆಯವರು ಸಂಶಯದಿಂದ ಇಬ್ಬರನ್ನು ಮುಲ್ಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಘಟನೆಯವರು ಸೇರುತ್ತಿದ್ದಂತೆ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅನ್ಯ ಕೋಮಿನ ಯುವಕ ತೌಫೀಕ್ ನ ಮನೆಯವರನ್ನು ಕರೆಯಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.