ಬಂಟ್ವಾಳ: ಬಂಟ್ವಾಳ ಪುರಸಭೆಯ ತ್ಯಾಜ್ಯ ಸಾಗಿಸುವ ಘನ ವಾಹನವು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಬಂಟ್ವಾಳ ಪುರಸಭೆಯಿಂದ ಬಂಟ್ವಾಳ ಮುಖ್ಯ ರಸ್ತೆಗೆ ಹೊರಟ ಪುರಸಭೆಯ ತ್ಯಾಜ್ಯ ಸಾಗಾಟ ಘನ ವಾಹನವು ಬಿ ಸಿ ರೋಡ್ ನಿಂದ ಬಂಟ್ವಾಳ ಕಡೆಗೆ ಹೋಗುತಿದ್ದ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ.
ಈ ಸಂದರ್ಭದಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಪ್ರಯಾಣಿಕರಿಗೆ ಕಣ್ಣು, ಮುಖ, ಎದೆಗೆ ಗಂಭೀರ ಗಾಯಗಳಾಗಿವೆ.
ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪುರಸಭೆಯ ವಾಹನವನ್ನು ಪರಿಶೀಲಿಸಿದಾಗ ಈ ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಅವಧಿ ಮುಗಿದು 2 ವರ್ಷ ಕಳೆದಿದ್ದು, ನವೀಕರಣ ಆಗದಿರುವುದು ಕಂಡು ಬಂದಿದೆ.
ಸಾರಿಗೆ ಇಲಾಖೆಯ ನಿಯಾಮಾಳಿ ಪ್ರಕಾರ ಎಫ್.ಸಿ. ಮಾಡದಿರುವ ವಾಹನ ಬಳಕೆಗೆ ಯೋಗ್ಯವಲ್ಲ.
ಅದು ಗುಜರಿ ವಾಹನಕ್ಕೆ ಸಮಾನವಾಗಿದೆ. ಎಫ್.ಸಿ. ಆಗದ ಗುಜರಿ ವಾಹನವನ್ನು ರಸ್ತೆಗೆ ಇಳಿಸಿದರೆ ಅಪಘಾತದ ಸಂದರ್ಭದಲ್ಲಿ ಗಾಯಾಳುಗಳಿಗೆ ವಿಮಾ ಪರಿಹಾರಕ್ಕೆ ಪರದಾಡುವ ಸಂಕಷ್ಟ ಎದುರಾಗುತ್ತದೆ.
ಬಂಟ್ವಾಳದ ಈ ಪ್ರಕರಣದಲ್ಲಿ ಪುರಸಭಾ ಮುಖ್ಯಸ್ಥರ ನಿರ್ಲಕ್ಷ್ಯ, ಬೇಜವಾಬ್ದಾರಿ ಹಾಗೂ ಕರ್ತವ್ಯ ಲೋಪ ಆಗಿದೆ ಎಂದು ಆರೋಪಿಸಲಾಗಿದೆ.
ಈ ಮಧ್ಯೆ ಪೊಲೀಸರಿಗೆ ಒತ್ತಡ ತಂದು ಕೇಸು ದಾಖಲಿಸದಿರಲು ಪ್ರಯತ್ನಿಸುತ್ತಿದ್ದಾಗ ಸ್ಥಳೀಯರು ಪ್ರತಿಭಟಿಸಿದ ಪರಿಣಾಮ ಕೊನೆಗೂ ಎಫ್. ಐ. ಆರ್. ದಾಖಲಾಗಿದೆ ಎಂದು ತಿಳಿದು ಬಂದಿದೆ.
ಪುರಸಭಾ ಮುಖ್ಯಾಧಿಕಾರಿಯ ಬೇಜವಾಬ್ದಾರಿ ತನಕ್ಕೆ ಗಾಯಳುಗಳ ಸಂಬಂಧಿಕರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೂಡಲೇ ಸಾರಿಗೆ ಅಧಿಕಾರಿಗಳು ಪೋಲಿಸರ ವಶದಲ್ಲಿರುವ ವಾಹನದ ಎಫ್.ಸಿ. ದಾಖಲೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಜರಗಿಸ ಬೇಕೆಂದು ಆಗ್ರಹಿಸಿದ್ದಾರೆ.
ಈ ಅಪಘಾತದ ಬಗ್ಗೆ ಪೋಲಿಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.