ಮಂಗಳೂರು; ಹಾಡುಹಗಲೇ ಹಂಪನಕಟ್ಟೆಯ ಮಂಗಳೂರು ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ಸಿಬ್ಬಂದಿ ರಾಘವೇಂದ್ರ ಆಚಾರ್ಯ ಎಂಬವರನ್ನು ಕೊಲೆಗೈದ ಆರೋಪಿ ಶಿಫಾಸ್(30) ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಚಾರಣೆಗೆ ಒಳಪಡಿಸಿದಾಗ ಹಲವು ಸ್ಫೋಟಕ ವಿಚಾರಗಳು ಗೊತ್ತಾಗಿವೆ. ಶಿಫಾಸ್ ಒಬ್ಬರೇ ಇರುವ ಚಿನ್ನಾಭರಣ ಅಂಗಡಿಗಳನ್ನು ಗುರಿಯಾಗಿಟ್ಟುಕೊಂಡು ಹೊಂಚು ಹಾಕುತ್ತಿದ್ದ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆರೋಪಿ ಮಂಗಳೂರು ಮಾತ್ರವಲ್ಲದೆ ತಮಿಳುನಾಡು, ಕೇರಳ, ಗೋವಾದಲ್ಲಿಯೂ ಇದೇ ರೀತಿಯ ಕೃತ್ಯ ನಡೆಸುವ ಉದ್ದೇಶದಿಂದ ಓಡಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ಇಲ್ಲಿ ನಡೆದಿರುವ ಕೃತ್ಯದ ಮಾದರಿಯಲ್ಲಿ ಬೇರೆ ರಾಜ್ಯಗಳಲ್ಲಿ ನಡೆದಿದ್ದರೆ ಅದರ ಮಾಹಿತಿ ನೀಡುವಂತೆ ಅಲ್ಲಿನ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿ ಪತ್ತೆಯಾಗಿದ್ದು ಹೇಗೆ? ಆರೋಪಿಯ ಪತ್ತೆಗೆ ಪೊಲೀಸರು ನಿರಂತರ ಒಂದು ತಿಂಗಳಿಂದ ಹುಡುಕಾಟ ನಡೆಸುತ್ತಿದ್ದರು.ಆದರೆ ಆರೋಪಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ. ಆತನ ಮುಖಚರ್ಯೆ ಸ್ಪಷ್ಟವಾಗಿ ಯಾವುದೇ ಸಿಸಿ ಕೆಮರಾದಲ್ಲಿ ದಾಖಲಾಗಿರಲಿಲ್ಲ. ಹಾಗಾಗಿ ಆತನ ಚಹರೆ, ಸಿಸಿ ಕೆಮರಾದಲ್ಲಿ ದಾಖಲಾಗಿದ್ದ ಚಿತ್ರಗಳನ್ನು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸಾರ್ವಜನಿಕರಿಂದ ಮಾಹಿತಿ ಕೋರಲಾಗಿತ್ತು. ಇದನ್ನು ಗಮನಿಸಿದ ಕಾಸರಗೋಡಿನ ಪೊಲೀಸರು ಓರ್ವ ಶಂಕಾಸ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದು ಮಾಹಿತಿ ನೀಡಿದ್ದರು. ಆತ ಧರಿಸಿದ್ದ ಬ್ಯಾಗ್‌ನ ಆಧಾರದಲ್ಲಿ ಗುರುತು ಪತ್ತೆ ಮಾಡಿದ್ದರು. ಬಳಿಕ ಮಂಗಳೂರು ಪೊಲೀಸರು ವಿಚಾರಿಸಿದಾಗ ಆತನೇ ಆರೋಪಿ ಎಂಬುದು ಗೊತ್ತಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಇನ್ನು ತಾನು ಚೂರಿಯಿಂದ ಇರಿದ ಅನಂತರ ತನ್ನ ಬಟ್ಟೆ ಮೇಲೆ ರಕ್ತ ಚೆಲ್ಲುವುದರಿಂದ ಬಟ್ಟೆಯನ್ನು ಎಲ್ಲಿಯಾದರೂ ಬಿಸಾಡಿ ಹೋಗುವುದು ಆರೋಪಿಯ ಯೋಚನೆಯಾಗಿತ್ತು. ಅದಕ್ಕಾಗಿ 3-4 ಬಟ್ಟೆಗಳನ್ನು ಒಂದರ ಮೇಲೆ ಒಂದರಂತೆ ಧರಿಸುತ್ತಿದ್ದ. ಕಾಸರಗೋಡಿನಲ್ಲಿ ವಶಕ್ಕೆ ಪಡೆಯುವಾಗಲೂ ಅದೇ ರೀತಿ ಬಟ್ಟೆ ಧರಿಸಿದ್ದ. ಆತ ಕಾಸರಗೋಡಿನಲ್ಲಿ ಅಂತಹುದೇ ಕೃತ್ಯ ನಡೆಸಲು ಹೊಂಚು ಹಾಕುತ್ತಿದ್ದ ಅನ್ನೋದು ಗೊತ್ತಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮಂಗಳೂರಿನ ಡಿಸಿಪಿ ಅಂಶುಕುಮಾರ್ ಅವರ ನೇತೃತ್ವದ 8 ಪೊಲೀಸ್ ತಂಡ ಹಾಗೂ ಕಾಸರಗೋಡು ಡಿವೈಎಸ್‌ಪಿ ಸುಧಾಕರನ್ ನೇತೃತ್ವದ ಪೊಲೀಸ್ ತಂಡ ಪಾಲ್ಗೊಂಡಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು. ಪೊಲೀಸ್ ತಂಡಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿ ಆಯುಕ್ತರು ಗೌರವಿಸಿದ್ದಾರೆ.