ಮಂಗಳೂರು: ಸುಮಾರು 30ವರ್ಷಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಂಆರ್‌ಪಿಎಲ್ ಬಳಿ ನಡೆದ ಕೊಲೆ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ ದಸ್ತಗಿರಿಯಾಗದೇ 30ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಸತತ ಕಾರ್ಯಾಚರಣೆ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳ ರಾಜ್ಯದ ಪುತ್ತೂರು ಕೊಟ್ಟಾರಕ್ಕರ ಕೊಲ್ಲಂನ ಕೈತಕೋಡ್ ನಿವಾಸಿ ಜೋಸ್ ಕುಟ್ಟಿ(55) ಬಂಧಿತ ಆರೋಪಿ. ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಗ್ರಾಮದಲ್ಲಿ ಎಂಆರ್‌ಪಿಎಲ್ ಟೌನ್‌ಶಿಪ್ ಸೈಟ್ ಪರಿಸರದಲ್ಲಿ ರಕ್ಷಕ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಇನ್ಸಿಟ್ಯೂಟ್ ಮಾಲಕ ಅಬ್ದುಲ್ಲಾರವರು ಐವರು ಸೆಕ್ಯೂರಿಟಿ ಗಾರ್ಡ್‌ಗಳನ್ನು ಡೆಲ್ಲಿ ಮೂಲದ ಸಂಸ್ಥೆಯ ಮೂಲಕ ನೇಮಿಸಿದ್ದರು.
1995 ಮಾರ್ಚ್ 12ರಂದು ರಾತ್ರಿ 10:30 ಸುಮಾರಿಗೆ ಈ ಸೈಟ್‌ನಲ್ಲಿ ಸುರೇಶ್, ನಾರಾಯಣ ಹಾಗೂ ದೇವಣ್ಣ ಎಂಬವರು ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡಿಕೊಂಡಿದ್ದರು. ಈ ಸಂದರ್ಭ ಮೂವರು ಈ ಪರಿಸರಕ್ಕೆ ಬಂದಿದ್ದಾರೆ. “ರಾತ್ರಿ ವೇಳೆ ಯಾಕೆ ಇಲ್ಲಿಗೆ ಬಂದಿದ್ದೀರಿ” ಎಂದು ಸೆಕ್ಯೂರಿಟಿ ಗಾರ್ಡ್‌ಗಳು ವಿಚಾರಿಸಿದ್ದಾರೆ. ಆಗ ಅಪರಿಚಿತರಲ್ಲಿ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳೊಂದಿಗೆ ಜಗಳ ಮಾಡಿ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಹಲ್ಲೆ ನಡೆಸಿದ್ದಾರೆ. ಈ ಪೈಕಿ ಗಂಭೀರವಾಗಿ ಗಾಯಗೊಂಡ ನಾರಾಯಣರವರು ಕೊಲೆಯಾಗಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೋಸ್ ಕುಟ್ಟಿ ಮತ್ತು ಅಚ್ಚನ್ ಕುಂಞ ಎಂಬವರು ಸೆಕ್ಯೂರಿಟಿ ಗಾರ್ಡ್ ನಾರಾಯಣರಲ್ಲಿ ಜಗಳ ಮಾಡಿ ಹಲ್ಲೆ ನಡೆಸಿ ಕೊಲೆ ಮಾಡಿದವರು.
ಈ ಇಬ್ಬರು ಅದೇ ದಿನ ರಾತ್ರಿ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದವರೊಂದಿಗೆ ಜಗಳ ತೆಗೆದಿದ್ದಾರೆ. ಈ ಸಂದರ್ಭ ಗಲಾಟೆ ಮಾಡದಂತೆ ತಡೆಯಲು ಬಂದಿದ್ದ ಆರೋಪಿಗಳ ಭಾವನಾದ ತೋಮಸ್ ಎಂಬವರಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಲಾಗಿತ್ತು. ಬಳಿಕ ಗಂಭೀರ ಗಾಯಗೊಂಡ ತೋಮಸ್‌ರವರಿಗೆ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಕೊಲೆ ಕೃತ್ಯ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಬಂಧನಕ್ಕೊಳಗಾಗಿ ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗೆ ಪೊಲೀಸರು ಮಾಹಿತಿಯನ್ನು ಸಂಗ್ರಹಿಸಿ ಪತ್ತೆಗೆ ಪ್ರಯತ್ನಿಸಿದ್ದರೂ ಆರೋಪಿಗಳು ಪತ್ತೆಯಾಗಿರಲಿಲ್ಲ.
ಆರೋಪಿಗಳು ಕೃತ್ಯ ನಡೆಸಿದ ನಂತರ ಅವರ ಊರಾದ ಕೇರಳಕ್ಕೆ ಹೋಗಿ ವಿವಿಧ ಕಡೆಗಳಲ್ಲಿ ಹಾಗೂ ಗುಜರಾತ್, ರಾಜಸ್ಥಾನ, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ವಿರುದ್ಧ ಎಲ್ ಪಿ ಸಿ ವಾರಂಟ್ ಜ್ಯಾರಿಯಲ್ಲಿತ್ತು. ಆರೋಪಿಗಳ ಪೈಕಿ ಅಚ್ಚನ್ ಕುಂಞ ಎಂಬಾತ 8 ವರ್ಷದ ಹಿಂದೆ ಮೃತಪಟ್ಟಿದ್ದನು. ಇನ್ನೋರ್ವ ಆರೋಪಿ ಜೋಸ್ ಕುಟ್ಟಿ ಎಂಬಾತನು ತಲೆಮರೆಸಿಕೊಂಡಿದ್ದನು. ಈತನ ಬಗ್ಗೆ ಸುಮಾರು 4 ತಿಂಗಳಿಂದ ಮಾಹಿತಿ ಸಂಗ್ರಹಿಸಿದ ಮಂಗಳೂರು ಸಿಸಿಬಿ ಪೊಲೀಸರು ಅಕ್ಟೋಬರ್ 23ರಂದು ಕೇರಳ ರಾಜ್ಯದ ಎರ್ನಾಕುಳಂ ಜಿಲ್ಲೆಯ ತ್ರಿಪ್ಪುಳಿತ್ತುರಂ ಎಂಬಲ್ಲಿ ದಸ್ತಗಿರಿ ಮಾಡಿ ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿರುತ್ತಾರೆ.