ಮೈಸೂರು: ಪ್ರತಿಷ್ಠಿತ ಮಠವೊಂದರ ಸ್ವಾಮೀಜಿಯಿಂದ ವಿದ್ಯಾರ್ಥಿನಿಯರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆದ ಆರೋಪ ಕೇಳಿ ಬಂದಿದ್ದು, ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಮಹಿಳಾ ಸಾಂತ್ವನ ಮತ್ತು ಮಕ್ಕಳ ವಸತಿ ಕೇಂದ್ರಕ್ಕೆ ದೂರು ನೀಡಿದ್ದಾರೆ.
ಮಠದ ಉಚಿತ ಹಾಸ್ಟೆಲ್ ನಲ್ಲಿ ಇರುವ ಪ್ರೌಢಶಾಲೆಯ ಕೆಲವು ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮಠದ ಪ್ರೌಢಶಾಲೆಯಲ್ಲಿ ಓದುವ ವಿದ್ಯಾರ್ಥಿನಿಯರು ಉಚಿತ ಹಾಸ್ಟೆಲ್ ನಲ್ಲಿ ವಾಸವಾಗಿದ್ದು, ಸರದಿಯಂತೆ ಸ್ವಾಮೀಜಿ ಬಳಿಗೆ ವಿದ್ಯಾರ್ಥಿನಿಯರು ಹೋಗಬೇಕು. ಒಪ್ಪದಿದ್ದಾಗ ಹಾಸ್ಟೆಲ್ ವಾರ್ಡನ್, ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡುತ್ತಾರೆ ಎನ್ನಲಾಗಿದೆ.
ಹಣ್ಣು ಮತ್ತು ಸಿಹಿ ಕೊಟ್ಟು ಆಶೀರ್ವಾದ ಮಾಡುವ ನೆಪದಲ್ಲಿ ಏಕಾಂತಕ್ಕೆ ಕರೆಸಿಕೊಳ್ಳುವ ಸ್ವಾಮೀಜಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ. ಕುಟುಂಬದವರ ಮಾಹಿತಿ ಪಡೆದುಕೊಂಡು ಕಷ್ಟದಲ್ಲಿರುವ ಪೋಷಕರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ ಎಂದು ಹೇಳಲಾಗಿದೆ.
ಯಾರಿಗಾದರೂ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಬಲವಂತದ ಲೈಂಗಿಕ ಕ್ರಿಯೆ ನಂತರ ಸ್ವಾಮೀಜಿ ಸ್ವಚ್ಛತೆಗೆ ಟಿಶ್ಯೂ ಬಳಸುತ್ತಿದ್ದರು. ವಿದ್ಯಾರ್ಥಿನಿಯರು ಬಾತ್ರೂಮ್ ಬಳಸುವಂತೆ ಹೇಳುತ್ತಿದ್ದರು. ಕಿರುಕುಳ ಪ್ರಶ್ನಿಸಿದ್ದಕ್ಕೆ ಕೆಲವು ವಿದ್ಯಾರ್ಥಿನಿಯರನ್ನು ಹಾಸ್ಟೆಲ್ ನಿಂದ ಹೊರಗೆ ಹಾಕಿದ್ದಾರೆ. ಈ ಕುರಿತಾಗಿ ಒಡನಾಡಿ ಸಂಸ್ಥೆಯಿಂದ ಪೊಲೀಸ್ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದೆ.