ಮನ್ನಾರ್: ಪ್ರಕೃತಿಯ ವಿಕೋಪಕ್ಕೆ ನಲುಗಿ ಸರ್ವಸ್ವವನ್ನೂ ಕಳೆದುಕೊಂಡ ಕೇರಳದ ವಯನಾಡಿಗೆ ದೇಶದ ನಾನಾ ಕಡೆಯಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ. ಭೂಕುಸಿತ ದುರಂತ ಪೀಡಿತ ಕುಟುಂಬದ ಹೆಣ್ಣುಮಕ್ಕಳಿಗೆ ಬದುಕು ಕಟ್ಟಿಕೊಳ್ಳಲು ಇದೀಗ ಇಬ್ಬರು ಯುವಕರು ಮುಂದೆ ಬಂದಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೂದನೂರು ತಯ್ಯೂರು ಮೂಲದ ವಿಷ್ಣುಕುಮಾರ್ (30) ಮತ್ತು ಮಾವೇಲಿಕ್ಕರ ಮೂಲದ ದೀಪುರಾಜ್ (31) ಹೆಸರಿನ ಇಬ್ಬರು ಯುವಕರು ಆಪತ್ಕಾಲದಲ್ಲಿ ತಮ್ಮ ಕುಟುಂಬವನ್ನೇ ಕಳೆದುಕೊಂಡು ಅನಾಥರಾದ ಯುವತಿಯರಿಬ್ಬರಿಗೆ ಮದುವೆ ಎಂಬ ಬಂಧನ ಮೂಲಕ ಉಜ್ವಲ ಬದುಕು ಕಟ್ಟಿಕೊಡಲು ಮುಂದಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ಕಂಪನಿಯ ಕೆಲಸ ಬಿಟ್ಟಾಗ ಸಿಕ್ಕ ಹಣದಲ್ಲಿ ಅಕ್ಕನ ಮನೆಯ ಸಮೀಪವೇ ಮನೆ ಕಟ್ಟಲು ಆರಂಭಿಸಿದ ವಿಷ್ಣು, ಈಗ ಮನ್ನಾರ್ನ ಇರಮತ್ತೂರು ಮುಂದುವೆಲ್ನಲ್ಲಿ ನೆಲೆಸಿದ್ದಾರೆ. ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತದಿಂದ ಮನನೊಂದ ತಾಯಿಯ ಕೋರಿಕೆಯಂತೆ ವಿಷ್ಣು ಈ ನಿರ್ಧಾರಕ್ಕೆ ಬಂದಿದ್ದಾರೆ. ಡ್ರೈವಿಂಗ್ ಗೊತ್ತಿರುವುದರಿಂದ ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿರುವ ವಿಷ್ಣು, ವಯನಾಡಿನ ಸೂಕ್ತ ಯುವತಿಯೊಬ್ಬಳನ್ನು ಜೀವನ ಸಂಗಾತಿಯಾಗಿ ಪಡೆಯಲಿದ್ದಾರೆ.
ಮಿಮಿಕ್ರಿ, ಜಾನಪದ ಗೀತೆಗಳಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿರುವ ದೀಪುರಾಜ್, ಖಾಸಗಿ ಬಸ್ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕುಟ್ಟನಾಡ್ ನಡನ್ ಪಟ್ ಕಲಾ ಸಮಿತಿಯೊಂದಿಗೆ ಕಾರ್ಯಕ್ರಮಗಳನ್ನು ನೀಡುತ್ತಿದ್ದ ಈ ಯುವಕ ಚೆಟ್ಟಿಕುಲಂಗರದಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆ ಬಯಕೆಯನ್ನು ಹಂಚಿಕೊಂಡ ನಂತರ ವಯನಾಡಿನಿಂದ ದೀಪು ಅವರನ್ನು ಅರಸಿ ಹಲವು ಫೋನ್ ಕರೆಗಳು ಬರುತ್ತಿವೆ. ಶನಿವಾರ ಸಂಜೆ ದೀಪುರಾಜ್ ವಯನಾಡಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಈ ವೇಳೆ ದೀಪುವಿನ ಸಹೋದರಿಯರು ಸೋನಿ ಮತ್ತು ಕಿಂಗಿಣಿ ಕೂಡ ಸಾಥ್ ನೀಡಲಿದ್ದಾರೆ.
ಇದೇ ರೀತಿ ಸಾಕಷ್ಟು ಯುವಕರು ಅನಾಥರಾದ ಹೆಣ್ಣು ಮಕ್ಕಳಿಗೆ ಜೀವನ ಕೊಡಲು ಮುಂದೆ ಬರುತ್ತಿದ್ದಾರೆಂದು ತಿಳಿದುಬಂದಿದೆ. ಈ ಮಹಾ ದುರಂತದಿಂದ ತತ್ತರಿಸಿರುವ ವಯನಾಡಿಗೆ ಅನೇಕ ಸೆಲೆಬ್ರಿಟಿಗಳು ನೆರವಿನ ಹಸ್ತವನ್ನು ಚಾಚಿದ್ದಾರೆ.