ಮಂಗಳೂರು: ಸಮುದ್ರದ ಅಲೆಗೆ ಸಿಲುಕಿದ ಮುಂಬೈ ಮೂಲದ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮತ್ತೋರ್ವ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ಎನ್ಐಟಿಕೆ ಬಳಿಯ ಕಡಲ ತೀರದಲ್ಲಿ ಜರುಗಿದೆ. ಮುಂಬೈನಲ್ಲಿ ದ್ವಿತೀಯ ಪಿಯುಸಿ ಮುಗಿಸಿರುವ ಧ್ಯಾನ್ ಬಂಜನ್ (18) ಮೃತ ವಿದ್ಯಾರ್ಥಿ. ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಹನೀಶ್ ಕುಲಾಲ್ (15) ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಸುರತ್ಕಲ್‌ನಲ್ಲಿ ನಡೆದ ಮದುವೆಗೆ ಮುಂಬೈನಿಂದ ಬಂದಿದ್ದ ಹತ್ತು ಮಂದಿಯಿದ್ದ ಕುಟುಂಬ ಆಗಮಿಸಿತ್ತು. ಸುರತ್ಕಲ್ ಸಮೀಪದ ಸೂರಿಂಜೆಯ ಪ್ರಖ್ಯಾತ್ ಎಂಬವರ ಮನೆಗೆ ಮದುವೆ ಕಾರ್ಯಕ್ರಮಕ್ಕೆಂದು ಬಂದಿತ್ತು. ಮಂಗಳವಾರ ಸಂಜೆ 5.30ರ ವೇಳೆಗೆ ಎನ್ಐಟಿಕೆ ಬೀಚ್ ಬಳಿ ಈಜಾಡುತ್ತಿದ್ದರು. ನೀರಿನಲ್ಲಿ ಆಡುತ್ತಿದ್ದಾಗಲೇ ಧ್ಯಾನ್ ಮತ್ತು ಹನೀಶ್ ಕುಲಾಲ್ ನೀರಿನ ಅಲೆಯಲ್ಲಿ ಸಿಲುಕಿದ್ದು, ಈ ವೇಳೆ ಲೈಫ್ ಗಾರ್ಡ್ ಸಿಬ್ಬಂದಿ ಪ್ರದೀಪ್ ಆಚಾರ್ಯ ಅವರು, ಅಲೆಗಳ ಎಡೆಯಿಂದ ಧ್ಯಾನ್ ನನ್ನು ಎಳೆದು ಮೇಲಕ್ಕೆ ತಂದಿದ್ದಾರೆ. ಆದರೆ ಹನೀಶ್ ಕುಲಾಲ್ ಜೀವರಕ್ಷಕ ಸಿಬ್ಬಂದಿ ಕೈಗೆ ಸಿಗದೆ ನಾಪತ್ತೆಯಾಗಿದ್ದಾರೆ. ಧ್ಯಾನ್‌ನನ್ನು ಕೂಡಲೇ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಅಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಧ್ಯಾನ್ ಬಂಜನ್ ಮುಂಬೈನಲ್ಲಿ ನೆಲೆಸಿರುವ ಬೈಂದೂರು ಮೂಲದ ವಿವೇಕಾನಂದ ಬಂಜನ್ ಅವರ ಪುತ್ರನಾಗಿದ್ದು, ಹನೀಶ್ ಕುಲಾಲ್ ಮುಂಬೈನಲ್ಲಿ ನೆಲೆಸಿರುವ ಮಂಗಳೂರು ಮೂಲದ ಉಮೇಶ್ ಕುಲಾಲ್ ಅವರ ಪುತ್ರ ಎಂದು ತಿಳಿದುಬಂದಿದೆ. ಹನೀಶ್ ಪತ್ತೆಗಾಗಿ ಲೈಫ್ ಗಾರ್ಡ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.