ಕಾಸರಗೋಡು : ಆರೆಸ್ಸೆಸ್ ಹಿರಿಯ ಮುಖಂಡ ಗೋಪಾಲ ಚೆಟ್ಟಿಯಾರ್ (77) ಅಲ್ಪಕಾಲದ ಅನಾರೋಗ್ಯದ ಬಳಿಕ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಜನಿಸಿದ್ದ ಅವರು ವಿದ್ಯಾರ್ಥಿ ದಿಸೆಯಿಂದಲೇ ಆರೆಸ್ಸೆಸ್ ಚಟುವಟಿಕೆಗಳಿಂದ ಪ್ರಭಾವಿತರಾಗಿದ್ದರು. ವೃತ್ತಿಯಲ್ಲಿ ಕೇರಳ ಸರಕಾರ ಕಂದಾಯ ಇಲಾಖೆಯಲ್ಲಿ 35 ವರ್ಷ ಸೇವೆ ಸಲ್ಲಿಸಿದ್ದ ಗೋಪಾಲ ಚೆಟ್ಟಿಯಾರ್ 2002ರಲ್ಲಿ ಉಪ ತಹಸೀಲ್ದಾರ್ ಆಗಿ ನಿವೃತ್ತರಾಗಿದ್ದರು. ನಿವೃತ್ತಿ ಬಳಿಕ ತಮ್ಮ ಜೀವನವನ್ನು ಜನಸೇವೆಗೆ ಮುಡಿಪಾಗಿಟ್ಟಿದ್ದರು. ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಸೇವಾ ಪ್ರಮುಖ್, ಕರ್ನಾಟಕ ದಕ್ಷಿಣ ಪ್ರಾಂತ್ಯ ಸೇವಾ ಪ್ರಮುಖ್ ಹಾಗೂ ಮಂಗಳೂರು ವಿಭಾಗ ಸಂಘ ಚಾಲಕರಾಗಿ ಸೇವಾ ಚಟುವಟಿಕೆ ನಡೆಸಿದ್ದರು.
ಮೂಲತಃ ಪೆರ್ಲ ನಿವಾಸಿಯಾಗಿದ್ದ ಅವರು ಒಂದೂವರೆ ವರ್ಷದಿಂದ ಬಂದ್ಯೋಡಿನಲ್ಲಿ ನೆಲೆಸಿದ್ದರು. ಇದಲ್ಲದೆ, ಸಮಾಜದ ನಾನಾ ಚಟುವಟಿಕೆಗಳಲ್ಲಿ ತೊಡಗಿಸಿದ್ದರು. ಮೃತರ ಅಂತ್ಯಸಂಸ್ಕಾರ ಬಂದ್ಯೋಡಿನಲ್ಲಿ ನಡೆಯಿತು. ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಿ.ಎಸ್. ಪ್ರಕಾಶ್, ಪ್ರಾಂತ ಪ್ರಚಾರಕ್ ನಂದೀಶ್, ಮಾಜಿ ಸಚಿವ ಎಸ್. ಅಂಗಾರ, ಬಿಜೆಪಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಬೃಜೇಶ್ ಚೌಟ ಸೇರಿದಂತೆ ಹಲವಾರು ಆರೆಸ್ಸೆಸ್, ಬಿಜೆಪಿ ಪ್ರಮುಖರು ಅಂತ್ಯಸಂಸ್ಕಾರ ಸಂದರ್ಭದಲ್ಲಿ ಪಾಲ್ಗೊಂಡು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.