ಬೆಂಗಳೂರು: ಪೊಲೀಸ್ ಇಲಾಖೆಯನ್ನ ಕೇಸರಿಕರಣ ಮಾಡಲು ಹೊರಟಿದ್ದೀರಾ ನೀವು..? ನಮ್ಮ ಸರ್ಕಾರದಲ್ಲಿ ಇದಕ್ಕೆ ಅವಕಾಶ ಕೊಡೊಲ್ಲ. ಮಂಗಳೂರು, ಬಿಜಾಪುರ, ಬಾಗಲಕೋಟದಲ್ಲಿ ನೀವು ಹೇಗೆ ಕೇಸರಿ ಬಟ್ಟೆ ಹಾಕೊಂಡು ಇಲಾಖೆಗೆ ಅವಮಾನ ಮಾಡಿದ್ರಿ ಅಂತಾ ಗೊತ್ತಿದೆ.
ಈ ಸಭೆಗೂ ಕೇಸರಿ ಶಾಲು ಹಾಕಿಕೊಂಡು ಬರಬೇಕಾಗಿತ್ತು. ದೇಶದ ಬಗ್ಗೆ ಗೌರವ ಇದ್ರೆ ರಾಷ್ಟ್ರ ಧ್ವಜ ಹಾಕೊಂಡು ಕೆಲಸ ಮಾಡಬೇಕಿತ್ತು. ನಮ್ಮ ಸರಕಾರದಲ್ಲಿ ಪೊಲೀಸ್ ಇಲಾಖೆಯನ್ನ ಕೇಸರಿಕರಣ ಮಾಡಲು ನಾವು ಬಿಡೊಲ್ಲ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತರಾಟೆಗೆ ತೆಗೆದುಕೊಂಡರು.
ಮಂಗಳವಾರ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದಂತ ಅವರು, PSI ಅಕ್ರಮದಲ್ಲಿ ಒಬ್ಬ ಎಡಿಜಿಪಿ ಓಎಂಆರ್ ಪೇಪರ್ ತಿದ್ದುತ್ತಾರೆ ಅಂದರೆ ಇಲಾಖೆ ಎಷ್ಟು ಕೆಟ್ಟು ಹೋಗಿದೆ ನೋಡಿ. ಪ್ರೆಸ್ ಕಾನ್ಫರೆನ್ಸ್ ಮಾಡಿ ಪ್ರಕರಣ ಬಯಲಿಗೆ ತಂದವರನ್ನೇ ಹರಾಸ್ ಮಾಡಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.
ಪ್ರಿಯಾಂಕ್ ಖರ್ಗೆ ಅವರಿಗೆ ಕಾಟ ಕೊಟ್ಟಿದ್ದೀರಾ.? ಇಡೀ ದೇಶದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರಿತ್ತು. ಆ ಗೌರವ, ಘನತೆಯನ್ನ ಹಾಳು ಮಾಡಿದ್ದೀರ ನೀವು. ಎಲ್ಲಿ ನೋಡಿದ್ರು ಬರೀ ಕಾಸು, ಕಾಸು, ಕಾಸು. ನಮ್ಮ ಸರ್ಕಾರದಲ್ಲಿ ಎಲ್ಲವೂ ಕ್ಲೀನ್ ಆಗಬೇಕು. ಜನ ಈ ಸರಕಾರದಿಂದ ಬಹುದೊಡ್ಡ ಬದಲಾವಣೆಯನ್ನು ನಿರೀಕ್ಷೆ ಮಾಡಿದ್ದಾರೆ. ಅದು ಪೊಲೀಸ್ ಇಲಾಖೆಯಿಂದಲೇ ಶುರು ಆಗಬೇಕು. ಈ ಸರಕಾರದಿಂದ ಬದಲಾವಣೆ ಸಂದೇಶ ಜನರಿಗೆ ಹೋಗಬೇಕು ಎಂಬುದಾಗಿ ಎಚ್ಚರಿಕೆ ನೀಡಿದರು.
ನಿಮ್ಮಿಂದ ನಮಗೆ ನಯಾಪೈಸೆ ಹಣ ಬೇಕಿಲ್ಲ. ನೀವು ಯಾರಿಗೂ ಹಣ ಕೊಡೋದು ಬೇಡ. ಜನ ನರಳದಂತೆ ಉತ್ತಮವಾಗಿ ಕೆಲಸ ಮಾಡಿದ್ರೆ ಸಾಕು. ನಿಮ್ಮ ಹಿಂದಿನ ವರ್ತನೆ ನಮ್ಮ ಸರ್ಕಾರದಲ್ಲಿ ನಡೆಯೊಲ್ಲ. ಹಿಂದೆ ಪೇ ಸಿಎಂ ಅಭಿಯಾನ ಮಾಡಿದಾಗ ನನ್ನ ಮತ್ತು ಸಿದ್ದರಾಮಯ್ಯರ ಜೊತೆ ಹೇಗೆ ನಡೆದುಕೊಂಡಿದ್ದೀರಾ ಗೊತ್ತಿದೆ. ನಮ್ಮ ಮೇಲೆ ಕೇಸ್ ಹಾಕಿದ್ರಿ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು, ಸುಳ್ಳು ಸಾವಿರಾರು ಕೇಸ್ ಹಾಕಿದ್ರಿ. ಅವರನ್ನು ಹರಾಸ್ ಮಾಡಿದ್ರಿ. ನಮ್ಮನ್ನೇ, ಸಿದ್ದರಾಮಯ್ಯ ಅವರನ್ನೇ ಬಿಡದ ನೀವು ಇನ್ನು ಸಾಮಾನ್ಯ ಜನರನ್ನು ಬಿಡ್ತೀರಾ? ಆದರೆ ಎದುರು ಪಾರ್ಟಿ ವಿರುದ್ಧ ಮಾತ್ರ ಯಾವುದೇ ಕೇಸ್ ಹಾಕಲಿಲ್ಲ. ಅವರ ಜತೆ ಶಾಮೀಲಾಗಿ ಕುಣಿದ್ರಿ ಎಂದು ಕಿಡಿಕಾರಿದರು.
ಟಿಪ್ಪು ಸುಲ್ತಾನ್ ಅವರನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಕೊಲೆ ಮಾಡಲು ಕರೆ ನೀಡಿದ, ಪ್ರೇರಣೆ ನೀಡಿದವರ ವಿರುದ್ಧ ಯಾಕೆ ಕೇಸ್ ಹಾಕಲಿಲ್ಲ ನೀವು. ಅದು ಕ್ರೈಂ ಅಲ್ವಾ? ನೀವು ಏನೇನೂ ಮಾಡಿದ್ದೀರಾ ಅಂತ ನಮ್ಮ ಬಳಿ ಸಾಕ್ಷಿ ಇವೆ. ನಾವು ಎಲ್ಲವನ್ನೂ ವಾಚ್ ಮಾಡಿದ್ದೇವೆ. ಇವೆಲ್ಲ ನಮ್ಮ ಸರ್ಕಾರದಲ್ಲಿ ನಡೆಯೊಲ್ಲ. ನೀವು ಬದಲಾಗಬೇಕು. ನಿಮ್ಮ ವರ್ತನೆ ಬದಲಾಗಬೇಕು. ಇಲ್ಲ ಅಂದ್ರೆ ನಿಮ್ಮನ್ನೇ ಬದಲಾವಣೆ ಮಾಡಬೇಕಾಗುತ್ತದೆ. ನಾವು ದ್ವೇಷ ಸಾಧಿಸೋದಿಲ್ಲ. ಅದರಲ್ಲಿ ನಮಗೆ ನಂಬಿಕೆ ಇಲ್ಲ. ನೀವು ಬದಲಾಗಿ, ಹಳೆಯದು ಬಿಡಿ. ಹೊಸದಾಗಿ ಕೆಲಸ ಶುರು ಮಾಡಿ. ಜನರ ನೆಮ್ಮದಿ ಕಾಪಾಡಿ ಎಂದು ಖಡಕ್ ಸೂಚನೆ ನೀಡಿದರು.
ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ನಾವು ನಿಮ್ಮ ಜೊತೆ ಇರುತ್ತೇವೆ. ಈ ಸರ್ಕಾರದ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ. ಅದನ್ನ ಉಳಿಸಿಕೊಳ್ಳಿ. ಈ ಸರಕಾರದಿಂದ ಬದಲಾವಣೆ ಆಗುತ್ತಿದೆ ಎಂಬ ಸಂದೇಶವನ್ನು ನಿಮ್ಮ ಕೆಲಸದ ಮೂಲಕ ಜನರಿಗೆ ನೀಡಿ ಎಂದು ತಿಳಿಸಿದರು.