ಪುತ್ತೂರು : ಮಾಜೀ ಸಿಎಂ ಡಿ.ವಿ.ಸದಾನಂದ ಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲು ಅವರ ಭಾವಚಿತ್ರವಿದ್ದ ಬ್ಯಾನರ್ಗೆ ಶ್ರದ್ಧಾಂಜಲಿ ಬರಹದೊಂದಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವ ಆರೋಪದ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಪಶ್ಚಿಮ ವಲಯ ಐಜಿಪಿಗೆ ಸೂಚನೆ ನೀಡಿದೆ. ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಡಿ.ವಿ.ಸದಾನಂದ ಗೌಡ ಮತ್ತು ಸಂಸದ ನಳಿನ್ ಭಾವಚಿತ್ರದೊಂದಿಗೆ, ‘ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬರೆದು ಪುತ್ತೂರು ಸರಕಾರಿ ಬಸ್ ನಿಲ್ದಾಣದ ಬಳಿ ಬ್ಯಾನರ್ ಅಳವಡಿಸಿ ಅದಕ್ಕೆ ಚಪ್ಪಲಿ ಹಾರ ಹಾಕಲಾಗಿತ್ತು. ಈ ಕುರಿತು ನಗರಸಭೆಯ ಆಯುಕ್ತ ಮಧು ಎಸ್. ಮನೋಹರ್ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು.