ಮಂಗಳೂರು: ನವರಾತ್ರಿ ಆಚರಣೆಯ ಸಲುವಾಗಿ ಅದೇ ಸಂದರ್ಭದಲ್ಲೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ನೀಡಬೇಕೆಂದು ದ.ಕ. ಜಿಲ್ಲಾಧಿಕಾರಿಗಳಿಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಸೂಚನೆ ನೀಡಿದ್ದಾರೆ. ಸೆ. 26ರಿಂದ ಅ.10ರವರೆಗೆ ಶಾಲಾ ಮಕ್ಕಳಿಗೆ ರಜೆ ನೀಡಲು ದ.ಕ. ಜಿಲ್ಲಾಧಿಕಾರಿಗೆ ನಿರ್ದೇಶಿಸಲು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೆ.26ರಿಂದ ನವರಾತ್ರಿ ಹಬ್ಬ ಪ್ರಾರಂಭವಾಗುತ್ತಿದೆ. ಮಂಗಳೂರು ದಸರಾ, ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿರುವ ರಥಬೀದಿ ಶಾರದಾ ಮಹೋತ್ಸವ, ಮಂಗಳಾದೇವಿ ದೇವಸ್ಥಾನ ಸಹಿತ ನಗರದೆಲ್ಲೆಡೆ ಅತ್ಯಂತ ಸಂಭ್ರಮದಲ್ಲಿ ದಸರ ಹಬ್ಬವನ್ನು ಆಚರಿಸಲಾಗುತ್ತದೆ. ಶಾಲಾ ಮಕ್ಕಳ ರಜೆಯನ್ನು ಹಬ್ಬದ ಸಂದರ್ಭದಲ್ಲೇ ನೀಡುವಂತೆ ಮನವಿ ಮಾಡಿದ್ದೆ. ಇದಕ್ಕೆ ಸಚಿವರು ಸ್ಪಂದಿಸಿದ್ದಾರೆ. ಅ.2ರ ಗಾಂಧಿ ಜಯಂತಿಯ ಆಚರಣೆ ಮಾಡುವ ಷರತ್ತಿನೊಂದಿಗೆ ರಜೆ ನೀಡಲು ಸೂಚಿಸಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.