ಉಡುಪಿ: ನ್ಯಾಯಾಲಯದ ಮೆಟ್ಟಿಲು ಹತ್ತಲಾಗದ ವೃದ್ಧೆಯ ಬಳಿ ಖುದ್ದು ನ್ಯಾಯಾಧೀಶರೇ ಹಾಜರಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯಲ್ಲಿ ಲೋಕ ಅದಾಲತ್ ವಿಚಾರಣೆಯ ವೇಳೆ ಈ ಒಂದು ಭಾವಪೂರ್ಣ ಘಟನೆ ನಡೆದಿದೆ. 2011ರ ಕೇಸ್ ಒಂದರಲ್ಲಿ 81 ವರ್ಷದ ದೇವಕಿ ಶೆಡ್ತಿ ಕಕ್ಷಿದಾರರಾಗಿದ್ದರು.
ಆರೋಗ್ಯ ತೀರಾ ಹದಗೆಟ್ಟು ಎದ್ದು ಓಡಾಡಲಾಗದ ಸ್ಥಿತಿಯಲ್ಲಿದ್ದರು.
ನ್ಯಾಯಾಲಯದಲ್ಲಿ ಕೇಸು ಮುಂದುವರಿಸಲು ಮಗಳಿಗೆ ಜಿಪಿಎ ನೀಡಿದ್ದರು. ಈ ಬಗ್ಗೆ ಖಚಿತ ಪಡಿಸಲು ದೇವಕಿ ಶೆಟ್ಟಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ನ್ಯಾಯಾಲಯದ ಆವರಣದವರೆಗೆ ರಿಕ್ಷಾದಲ್ಲೇ ಅವರು ಬಂದಿದ್ದರು. ಆದರೆ ಕೋರ್ಟ್ ಮೆಟ್ಟಿಲು ಹತ್ತಲಾಗದೆ ಅಸಹಾಯಕರಾಗಿ ಆಟೋದಲ್ಲೇ ಕುಳಿತಿದ್ದರು.
ಈ ವಿಷಯ ತಿಳಿದು ಕೂಡಲೇ ನ್ಯಾಯಾಧೀಶ ಜೀತು ಎಸ್.ಆರ್ ಖುದ್ದು ವೃದ್ದೆಯ ಬಳಿ ಬಂದು ವಿಚಾರಿಸಿದರು. ಜಿಪಿಎ ನೀಡಿದ್ದರ ಬಗ್ಗೆ ದೇವಕಿ ಶೆಟ್ಟಿ ಅವರ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿದರು. ಅವರ ಪ್ರಕರಣವನ್ನು ಕೂಡಲೇ ಇತ್ಯರ್ಥಪಡಿಸಿದರು. ನ್ಯಾಯಾಧೀಶರ ಈ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.