ಕೊಟ್ಟಾಯಂ(ಕೇರಳ): ಗೂಗಲ್ ಮ್ಯಾಪ್ ಹಾಕಿಕೊಂಡು ಪ್ರಯಾಣಿಸುತ್ತಿದ್ದ ಹೈದರಾಬಾದ್ ಮೂಲದ ಪ್ರವಾಸಿಗರಿದ್ದ ಕಾರು ದಕ್ಷಿಣ ಕೇರಳ ಜಿಲ್ಲೆಯ ಕುರುಪ್ಪಂಥಾರ ಸಮೀಪ ಹೊಳೆಗೆ ಬಿದ್ದಿದೆ. ಈ ಘಟನೆ ಶನಿವಾರ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓರ್ವ ಮಹಿಳೆ ಸೇರಿದಂತೆ ನಾಲ್ವರು ಪ್ರವಾಸಿಗರು ಕಾರಿನಲ್ಲಿ ಅಲಪ್ಪುಳ ಕಡೆಗೆ ತೆರಳುತ್ತಿದ್ದರು. ಇವರು ಪ್ರಯಾಣಿಸುತ್ತಿದ್ದ ರಸ್ತೆ ಮಾರ್ಗದಲ್ಲಿ ಹೊಳೆ ನೀರು ಉಕ್ಕಿ ಹರಿಯುತ್ತಿತ್ತು. ಪ್ರವಾಸಿಗರಿಗೆ ಈ ಪ್ರದೇಶದ ಪರಿಚಯವಿರಲಿಲ್ಲ. ಹೀಗಾಗಿ ಮ್ಯಾಪ್ ಬಳಸಿ ಸಂಚರಿಸುತ್ತಿದ್ದರು. ಈ ವೇಳೆ, ವೇಗವಾಗಿ ಚಲಿಸುತ್ತಿದ್ದ ಕಾರು ಹೊಳೆಗೆ ಬಿದ್ದಿದೆ.
ವಿಷಯ ತಿಳಿದ ಪೊಲೀಸರು, ಸ್ಥಳೀಯ ನಿವಾಸಿಗಳು ಕಾರಿನಲ್ಲಿದ್ದ ನಾಲ್ವರನ್ನು ರಕ್ಷಿಸಿದ್ದಾರೆ. ಕಾರು ಸಂಪೂರ್ಣವಾಗಿ ಹೊಳೆ ನೀರಿನಲ್ಲಿ ಮುಳುಗಿದ್ದು, ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ ಎಂದು ಕಡುತುರುತಿ ಪೊಲೀಸ್ ಠಾಣೆಯ ಅಧಿಕಾರಿ ಮಾಹಿತಿ ನೀಡಿದರು.
ಕೇರಳದಲ್ಲಿ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇಬ್ಬರು ಯುವ ವೈದ್ಯರು ಇದೇ ರೀತಿಯ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆನ್‌ಲೈನ್ ಮ್ಯಾಪ್ ಸಹಾಯದಿಂದ ಪ್ರಯಾಣಿಸುತ್ತಿದ್ದಾಗ ಇವರಿದ್ದ ಕಾರು ನದಿಗೆ ಬಿದ್ದಿತ್ತು. ಈ ಘಟನೆಯ ಬಳಿಕ, ಮಳೆಗಾಲದಲ್ಲಿ ಆನ್‌ಲೈನ್ ಮ್ಯಾಪ್ ಬಳಸಿ ಪ್ರಯಾಣಿಸುವಾಗ ವಿಶೇಷ ಎಚ್ಚರಿಕೆ ವಹಿಸುವಂತೆ ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದರು.