ಉಡುಪಿ : ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಲಾಭದ ಆಮಿಷವೊಡ್ಡಿ ಸುಮಾರು 44 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಉಡುಪಿಯಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಭಂದಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಮೈಸೂರಿನ ಶೋಯಬ್ ಅಹಮದ್ (28) ಹಾಗೂ ಮುದ್ದಾಸಿರ್ ಅಹಮದ್ (40) ಎಂದು ಗುರುತಿಸಲಾಗಿದೆ.
ಉಡುಪಿಯ ಶಿವಳ್ಳಿ ಗ್ರಾಮದ ತೀರ್ಥರಾಜ ಶೆಣೈ(51) ಎಂಬುವವರು ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತೀರ್ಥರಾಜ ಶೆಣೈ ನೀಡಿದ ದೂರಿನನ್ವಯ “Capital Gains Crew ಎಂಬ ಟೆಲಿಗ್ರಾಂ ಗ್ರೂಪ್ ಗೆ Adi Nihal ಎಂಬ ಅಪರಿಚಿತ ವ್ಯಕ್ತಿ ಸೇರ್ಪಡೆಗೊಳಿಸಿದ್ದಾನೆ. ಬಳಿಕ Fidility Institutional Partners F – 101 ಗ್ರೂಪ್ ಗೆ ಸೇರಿಸಿದ್ದು, ಈ ಗ್ರೂಪ್‌ನಲ್ಲಿ ಷೇರು ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದಾರೆ. ಬಳಿಕ ತೀರ್ಥರಾಜ ಅವರು ತಮ್ಮ ಮತ್ತು ಅವರ ತಾಯಿಯ ಬ್ಯಾಂಕ್ ಖಾತೆಯಿಂದ 2024ರ ಡಿಸೆಂಬರ್ 19 ರಿಂದ 2025ರ ಜನವರಿ 7 ರವರೆಗೆ ಅಪರಿಚಿತರು ಸೂಚಿಸಿದ ವಿವಿಧ ಖಾತೆಗಳಿಗೆ ಒಟ್ಟು 44 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದಾರೆ. ದೂರುದಾರರು ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶವನ್ನಾಗಲಿ ನೀಡದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಆದೇಶದಂತೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ನಾಯಕ್ ಮತ್ತು ಸಹಾಯಕ ಪೊಲೀಸ್ ಉಪಾಧೀಕ್ಷಕ ಡಾ. ಹರ್ಷ ಪ್ರಿಯಂವದ ಅವರ ನಿರ್ದೇಶನ ಮೇರೆಗೆ ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ರಚಿಸಿದ ವಿಶೇಷ ತಂಡವು ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಬಂಧಿತರಿಂದ ಪ್ರಕರಣಕ್ಕೆ ಸಂಬಂಧಿಸಿದ ₹2 ಲಕ್ಷ ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




