ಮಂಗಳೂರು: ಪ್ರಸ್ತುತ ದೇಶದಲ್ಲಿ ಸರಕಾರದಿಂದ ಮಂಜೂರಾಗುವ 100 ರೂ. ಅನುದಾನದಲ್ಲಿ 15 ಪೈಸೆ ಮಾತ್ರ ಅಭಿವೃದ್ಧಿಗೆ ಬಳಕೆಯಾಗುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ರೋಟರಿ ಜಿಲ್ಲೆ 3181ರ ವತಿಯಿಂದ ಶನಿವಾರ ಮಂಗಳೂರಿನಲ್ಲಿ ಆಯೋಜಿಸಿದ ಜಿಲ್ಲಾ ಸಮಾವೇಶ “ಪರಿಕಲ್ಪನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1985ರಲ್ಲಿ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ಸರಕಾರದಿಂದ ಮಂಜೂರಾಗುವ ಪ್ರತೀ 1 ರೂ. ಅನುದಾನದಲ್ಲಿ 15 ಪೈಸೆ ಮಾತ್ರ ಅಭಿವೃದ್ಧಿಗಾಗಿ ಬಳಕೆಯಾಗುತ್ತದೆ ಎನ್ನುವ ಮಾತು ಚಾಲ್ತಿಯಲ್ಲಿತ್ತು. ಇಂದಿನ ಪರಿಸ್ಥಿತಿ ಅದನ್ನೂ ಮೀರಿ ಹೋಗಿದ್ದು, ನಮ್ಮ ದುರಾಸೆ ಮಾತ್ರ ವೃದ್ಧಿಯಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಬೊಕ್ಕಸದಿಂದ ಕೋಟ್ಯಂತರ ರೂಪಾಯಿ ವ್ಯಯಿಸುತ್ತವೆ. ಆದರೆ ನಾವು ಯಾವ ರೀತಿಯ ಅಭಿವೃದ್ಧಿ ಕಾಣುತ್ತಿದ್ದೇವೆ ಎಂದು ಪ್ರಶ್ನಿಸಿದರು.
ದೇಶದಲ್ಲಿ ಶ್ರೀಮಂತರಾಗಲು ಪೈಪೋಟಿ ಉಂಟಾಗಿದ್ದು, ಇದು ಸಮಾಜದಲ್ಲಿ ಬಿಕ್ಕಟ್ಟು ಸೃಷ್ಟಿಸಲಿದೆ. ದುರಾಸೆ ಎಂಬ ರೋಗ ಎಲ್ಲೆಡೆ ಹರಡುತ್ತಿದೆ. ಇದು ಎಲ್ಲಿಗೆ ತಲುಪುತ್ತದೆ ಎಂದು ಯೋಚಿಸುವಾಗ ಭಯವಾಗುತ್ತದೆ ಎಂದರು.