ಮಂಗಳೂರು : ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ (ಎನ್‌ಎಂಪಿಎ) ಸುಮಾರು 1,200 ಕೋ.ರೂ. ವೆಚ್ಚದ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಸಾಗರಮಾಲದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಸೆ. 2ರಂದು ಮಂಗಳೂರಿಗೆ ಆಗಮಿಸಲಿದ್ದು ಇನ್ನೆರಡುದಿನಗಳಲ್ಲಿ ಕಾರ್ಯ ಕ್ರಮದ ರೂಪರೇಖೆ ಅಂತಿಮಗೊಳ್ಳಲಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಳಗ್ಗೆ ಕೊಚ್ಚಿಯಲ್ಲಿ ಕಾರ್ಯಕ್ರಮದ ಬಳಿಕ ಸಂಜೆ 3.45ಕ್ಕೆ ಮಂಗಳೂರಿಗೆ ಆಗಮಿಸಲಿದ್ದು, ಎನ್‌ಎಂಪಿಎಗೆ ಭೇಟಿ ನೀಡಿ ಅಲ್ಲಿ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಬಳಿಕ ಸಂಜೆ 5 ಗಂಟೆಗೆ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಬಹುತೇಕ ಗೋಲ್ಡ್ ಫಿಂಚ್ ಸಿಟಿಮೈದಾನದಲ್ಲಿ ಸಮಾವೇಶ ನಡೆಯಲಿದೆ ಎಂದರು.
ಪ್ರಧಾನಿಯವರ ಜತೆ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ, ಕೇಂದ್ರ ಬಂದರು ಮತ್ತು ನೌಕಾಯಾನ ಸಚಿವ ಸರ್ಬಾನಂದ ಸೋನೊವಾಲಾ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮುಂತಾದವರು ಆಗಮಿಸುವ ನಿರೀಕ್ಷೆ ಎಂದು ತಿಳಿಸಿದ್ದಾರೆ.