ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಕಾರ್ಯಚರಿಸುತ್ತಿರುವ M11 ಎನರ್ಜಿ ಟ್ರಾನಿಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಐದು ಲಕ್ಷ ಮೌಲ್ಯದ ಅತ್ಯಾಧುನಿಕ L.P.D ಟೆಸ್ಟ್ ಹಾಗೂ ರೀನಲ್ ಫಂಕ್ಷನ್ ಟೆಸ್ಟ್ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ.

ಪಡುಬಿದ್ರಿ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ಜನರಿಗೆ ಉಚಿತ ಸೇವೆಯೊಂದಿಗೆ ಇದು ಸಹಕಾರಿಯಾಗಲಿದ್ದು ಇದು ಆರೋಗ್ಯ ಕೇಂದ್ರದ ಫಲಾನುಭವಿಗಳ ದೂರ ಪ್ರಯಾಣ ಶ್ರಮವನ್ನು ತಪ್ಪಿಸುತ್ತದೆ.
M11 ಸಂಸ್ಥೆಯು ಪರಿಸರದಲ್ಲಿ ಹಾನಿಕಾರಕ ರಾಸಾಯನಿಕ ತ್ಯಾಜ್ಯಗಳು ವಿಷಾನಿಲಗಳು ಸೇರಿ ವಾತಾವರಣ ಕಲುಷಿತಗೊಳ್ಳುವುದನ್ನು ತಗ್ಗಿಸುವ, ಅದಾಗಲೇ ಬಳಸಿದ ಅಡುಗೆ ಎಣ್ಣೆ, ಖಾದ್ಯ ತೈಲಗಳು ಮತ್ತೆ ಆಹಾರ ವ್ಯವಸ್ಥೆಯನ್ನು ಸೇರಿ ಜನರ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುವುದನ್ನು ತಪ್ಪಿಸುವ ಮೂಲಕ ಸ್ವಚ್ಛ ಆರೋಗ್ಯಕರ ಜಗತ್ತನ್ನು ಸೃಷ್ಟಿಸುವ ಗುರಿಯನ್ನಿರಿಸಿಕೊಂಡು ಕಾರ್ಯ ತತ್ಪರವಾಗಿದೆ. ಮುಖ್ಯವಾಗಿ ವಿವಿಧ ಮೂಲಗಳಿಂದ ಕಲುಷಿತ ತ್ಯಾಜ್ಯ ಬಳಸಿದ ಎಣ್ಣೆಯನ್ನು ಸಂಗ್ರಹಿಸಿ ಅದನ್ನು ಸಂಸ್ಕರಿಸಿ ಪ್ರಬಲ- ಪರ್ಯಾಯ ಜೈವಿಕ ಇಂಧನವಾಗಿ ಪರಿವರ್ತಿಸಿ ಇಂಧನಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲೂ ನಮ್ಮ ಸಂಸ್ಥೆ ಶ್ರಮಿಸುತ್ತಿದ್ದು ಬಳಸಿದ ಅಡುಗೆ ಎಣ್ಣೆ ದಿನವೊಂದರ 450 ಟನ್ ಬಯೋ ಡಿಸಿಲ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.
ಸಂಸ್ಥೆಯು ಬದಲಿ ಇಂಧನ ಉತ್ಪಾದನೆಯೊಂದಿಗೆ ಪಡುಬಿದ್ರಿ ಮತ್ತು ಸುತ್ತಮುತ್ತಲು ಪರಿಸರದಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸುವ, ಉತ್ತಮ ವಾತಾವರಣವನ್ನು ಕಲ್ಪಿಸುವ, ಆ ಮೂಲಕ ಸಮುದಾಯಕ್ಕೆ, ಸಮಾಜಕ್ಕೆ ನೇರ ಮತ್ತು ಪರೋಕ್ಷ ಪ್ರಯೋಜನಗಳನ್ನು ಕಲ್ಪಿಸಿಕೊಡುವ ಮೂಲಕ ಸಾಮಾಜಿಕ ಅಭಿವೃಧ್ಧಿ ಸಾಧನೆಯ ಧ್ಯೇಯವನ್ನೂ ಹೊಂದಿದೆ. M11 ಸಂಸ್ಥೆಯು ಉತ್ತಮ ಗುಣ ಮಟ್ಟದ ಬಯೋ ಡಿಸೀಲ್ ಇಂಧನವನ್ನು ತೈಲ ಮಾರುಕಟ್ಟೆಗೆ ಸರಬರಾಜು ಮಾಡುತ್ತಾ ಪ್ರಶಂಸೆಗೂ ಪಾತ್ರವಾಗಿದೆ. ಮುಖ್ಯವಾಗಿ ಶಿಕ್ಷಣ, ಆರೋಗ್ಯ ಮತ್ತು ಸಮುದಾಯ ಅಭಿವೃಧ್ಧಿಯ ಕಾರ್ಯಭಾರಗಳನ್ನೂ ಅದು ಸಹಾಯ ಹಸ್ತ ನೀಡುತ್ತ ಬಂದಿದೆ.
ಶಿಕ್ಷಣವು ಸಮಾಜ-ಸಮುದಾಯಗಳ ಪ್ರಗತಿಗೆ ಮತ್ತು ಅಭಿವೃಧ್ಧಿ ಸಾಧನೆಯ ಮೂಲ ತಳಹದಿ ಎಂದು ನಂಬಿರುವ ನಮ್ಮ ಸಂಸ್ಥೆ “ಶಾಲೆಯನ್ನು ದತ್ತು ತೆಗೆದುಕೊಳ್ಳಿ” ಕಾರ್ಯಕ್ರಮದ ಮೂಲಕ ಪಡುಬಿದ್ರಿ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನೂ ದತ್ತು ತೆಗೆದುಕೊಂಡು ಮೂಲ ಸೌಕರ್ಯ ಕಲ್ಪಿಸುವ ನವೀಕರಿಸುವ ದಿಸೆಯಲ್ಲೂ ನೆರವಾಗಲಿದೆ.
ನಮ್ಮ ಕಂಪೆನಿಯು ವಾಣಿಜ್ಯ ಮತ್ತು ಉದ್ಯಮ ಸಂಸ್ಥೆಯಾಗಿದ್ದರೂ ಸಮಾಜ ಹಿತ ಸಾಧನೆಯ ಎಲ್ಲಾ ಉಪಕ್ರಮಗಳಲ್ಲೂ ಭಾಗಿಯಾಗುತ್ತಾ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯನ್ನು ಸದಾ ಕಾಯ್ದುಕೊಂಡು ಉತ್ತಮ ಭವಿಷ್ಯ ನಿರ್ಮಾಣದ ಆಶಯಗಳನ್ನು ಹೊಂದಿದೆ ಎಂದು ಸಂಸ್ಥೆಯ ಸಿಬ್ಬಂಧಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ವಾಸುದೇವ ಉಪಾಧ್ಯಾಯ,ಸ್ಥಳೀಯ ಆರೋಗ್ಯ ಅಧಿಕಾರಿಗಳಾದ ಡಾ.ಬಸವರಾಜ್, ಪಡುಬಿದ್ರಿ ಆರೋಗ್ಯ ಕೇಂದ್ರದ ಡಾ.ರೇಖಾ ಕಿಣಿ, M11 ಎನರ್ಜಿ ಟ್ರಾನಿಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹೆಚ್.ಆರ್ ಆಗಿರುವ ಗುರುಪ್ರಸಾದ್ ಫಡ್ಕೆ, ಅಡ್ಮಿನ್ಸ್ಟ್ರೇಟಿವ್ ಆಫೀಸರ್ ಮಧು ಎಸ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.