ಮಂಗಳೂರು : ಪಾರ್ಕ್ ಮಾಡಲಾಗಿದ್ದ ಟೆಂಪೋ ಟ್ರ್ಯಾವೆಲರ್‌ನ್ನೇ ಕಳ್ಳತನ ಮಾಡಿದ್ದ ಮೂವರು ಖದೀಮರನ್ನು ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಟೆಂಪೊ ಟ್ರ್ಯಾವೆಲರ್ ಅನ್ನು ವಶಪಡಿಸಿಕೊಂಡಿದ್ದಾರೆ. ಅರೀಫ್ ಉಲ್ಲಾಖಾನ್ ಅಲಿಯಾಸ್ ಅರೀಫ್, ಅಮಿತ್ ಬಾಹುಬಲಿ ಪಂಚೋಡಿ ಅಲಿಯಾಸ್ ಬೇಬಿ, ಸುರೇಂದ್ರ ಕುಮಾರ್ ಬಂಧಿತ ಆರೋಪಿಗಳು. ಉರ್ವ ಠಾಣಾ ವ್ಯಾಪ್ತಿಯ ಕುಂಟಿಕಾನ ಫ್ಲೈ ಓವರ್ ಬಳಿ ಟೆಂಪೋ ಟ್ರಾವೆಲರ್ ವಾಹನವನ್ನು ಸೆಪ್ಟೆಂಬರ್ 14ರ ರಾತ್ರಿ 8.30 ವೇಳೆಗೆ ಪಾರ್ಕ್ ಮಾಡಲಾಗಿತ್ತು. ಆದರೆ, ಸೆಪ್ಟೆಂಬರ್ 15ರಂದು ಬೆಳಗ್ಗೆ ಬಂದು ನೋಡಿದಾಗ ವಾಹನ ಕಳುವಾಗಿತ್ತು. ಆದ್ದರಿಂದ, ವಾಹನದ ವಾರಸುದಾರರು ಉರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ವಾಹನ ಕಳ್ಳತನ ಮಾಡಿದ್ದ ಆರೋಪಿಗಳನ್ನು ವಾರದೊಳಗೆ ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತರಿಂದ ಟೆಂಪೋ ಟ್ರಾವೆಲರ್ ಉಳಿದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.