ಉಡುಪಿ: ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸರ್ಕಾರದ ಕೈಯಲ್ಲಿ ಇರಬಾರದು. ಅದು ಹಿಂದೂ ಸಂಸ್ಥೆಗಳ ಕೈಯಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ತಿರುಪತಿ ಲಡ್ಡು ಪ್ರಸಾದ ಘಟನೆಯಿಂದ ಸತ್ಯವಾಗಿ ನಮಗೆ ಕಾಣುತ್ತದೆ. ಹೀಗಾಗಿ ದೇವಸ್ಥಾನವನ್ನು ಶೀಘ್ರವಾಗಿ ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಬೇಕು ಎಂದು ಪೇಜಾವರ ವಿಶ್ವಪ್ರಸನ್ನ ಶ್ರೀಗಳು ಹೇಳಿದರು.
ತಿರುಪತಿ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಲಡ್ಡು ಪ್ರಸಾದಕ್ಕೆ ದನದ ತುಪ್ಪದ ಬದಲು ಪ್ರಾಣಿ ಜನ್ಯ ಕೊಬ್ಬಿನ ಮಿಶ್ರಣ ಬಳಕೆ ಮಾಡಿರುವ ವಿಚಾರ ಕೇಳಿ ಖೇದವಾಗಿದೆ. ಮೀನಿನ ಎಣ್ಣೆ, ಹಂದಿ ಹಸುವಿನ ಕೊಬ್ಬ ಬಳಸಿ ಪ್ರಸಾದ ತಯಾರಿಸಿರುವುದು ಸಮಾಜಕ್ಕೆ ಭಗವಂತನಿಗೆ ಬಗೆದಿರುವ ಅಪಚಾರ. ಇಂತಹ ಕೆಲಸಕ್ಕೆ ಸರ್ಕಾರ ಮುಂದಾಗಿದ್ದು ಖಂಡನೀಯ ಎಂದರು.
ತಿರುಪತಿ ಶ್ರೀನಿವಾಸನನ್ನು ಗೋರಕ್ಷಕ ಎಂದು ಕಾಣುತ್ತೇವೆ. ಅಂತಹ ಶ್ರೀನಿವಾಸ ದೇವರಿಗೆ ಹಸು ಕೊಬ್ಬು ಬಳಸಿದ ಪ್ರಸಾದ ನೀಡಿರುವುದು ಅಪರಾಧ. ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ಮಾಡಿರುವ ಹಲ್ಲೆ ಇದು. ಹಿಂದೂಗಳು ಉಪಯೋಗ ಅನರ್ಹವಾಗಿರುವ ವಸ್ತುಗಳನ್ನು ತಯಾರಿಸುವ ಅಡ್ಡೆಗಳನ್ನು ಕಂಡುಹಿಡಿದು ಶಿಕ್ಷಿಸಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.