ಮಂಗಳೂರು: ಚೀನಾದಲ್ಲಿ ನ್ಯೂಮೋನಿಯಾ ವೈರಸ್ ಬಾಧೆ ಉಲ್ಭಣಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಆರೋಗ್ಯ ಸಿಬ್ಬಂದಿ ಉಸಿರಾಟ ತೊಂದರೆ ಅನುಭವಿಸುತ್ತಿರುವ ರೋಗಿಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆ ವೈದ್ಯಕೀಯ ಸೇವೆ ಒದಗಿಸಲು ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ತಯಾರಿ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಅದೃಷ್ಟವಶಾತ್ ಸರಾಸರಿಗಿಂತ ಹೆಚ್ಚಿನ ಜ್ವರದ ಕೇಸ್ ಬರುತ್ತಿಲ್ಲ. ಆದ್ದರಿಂದ ಗಡಿ ಪ್ರದೇಶದಲ್ಲಿ ತಪಾಸಣೆ ನಡೆಸುವ ಅಗತ್ಯ ಸದ್ಯಕ್ಕೆ ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ. ಕೊರೊನಕ್ಕೆ ಅನುಸರಿಸಿದ ಪ್ರಾಥಮಿಕ ಜಾಗೃತಿ ಪಾಲಿಸುವಂತೆ ಜನರಿಗೆ ಸೂಚನೆ ನೀಡಲಾಗುತ್ತಿದೆ.