ಮಂಗಳೂರು: ಕರ್ತವ್ಯ ನಿರತ ಪೊಲೀಸರ ಮೇಲೆ ಚಾಲಕನೊಬ್ಬ ಆಟೋ ರಿಕ್ಷಾ ನುಗ್ಗಿಸಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಹೈವೇ ಪಟ್ರೋಲ್ ವಾಹನಕ್ಕೆ ಢಿಕ್ಕಿ ಹೊಡೆಸುವ ರೀತಿಯಲ್ಲಿ ಚಲಾಯಿಸಿ, ಬಳಿಕ ಪರಾರಿಯಾದ ಘಟನೆ ಗುರುವಾರ ರಾತ್ರಿ ಪಂಪ್‌ವೆಲ್ ಚೆಕ್‌ಪಾಯಿಂಟ್‌ನಲ್ಲಿ ನಡೆದಿದೆ.
ಮಂಗಳೂರು ಸಂಚಾರಿ ದಕ್ಷಿಣ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ ಸುಗುಮಾರನ್ ಅವರು ಸಿಬಂದಿ ಎಎಚ್‌ಸಿ ಮಹೇಶ್, ಎಎಸ್‌ಐ ಸಂತೋಷ್ ಪಡೀಲ್, ಸಿಎಚ್‌ಸಿ ರಾಜೇಶ್ ಮತ್ತು ಸಿಪಿಸಿ ಸುರೇಶ್ ಮತ್ತು ವೀರೇಶ್ ಅವರೊಂದಿಗೆ ವಾಹನ ತಪಾಸಣೆ ಕರ್ತವ್ಯದಲ್ಲಿದ್ದರು.ಈ ರಾತ್ರಿ ಸುಮಾರು 9.45ರ ವೇಳೆಗೆ ಕಂಕನಾಡಿ ಹಳೇ ರಸ್ತೆ ಕಡೆಯಿಂದ ಪಂಪ್‌ವೆಲ್‌ಗೆ ವೇಗವಾಗಿ ಆಟೋ ರಿಕ್ಷಾ ಬರುತ್ತಿರುವುದನ್ನು ಗಮನಿಸಿದ ಪೊಲೀಸ್ ಸಿಬಂದಿ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಚಾಲಕ ದುಡುಕುತನ ಹಾಗೂ ನಿರ್ಲಕ್ಷತನದಿಂದ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಯದ್ವಾತದ್ವಾ ಚಲಾಯಿಸಿ ಆಟೋವನ್ನು ಒಮ್ಮೆಲೇ ಪೊಲೀಸರತ್ತ ನುಗ್ಗಿಸಿಕೊಂಡು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಇಲಾಖಾ ಹೈವೇ ಪಟ್ರೋಲ್ ವಾಹನಕ್ಕೆ ಢಿಕ್ಕಿಪಡಿಸುವ ರೀತಿಯಲ್ಲಿ ಚಲಾಯಿಸಿ ಬಿ.ಸಿ. ರೋಡ್ ಕಡೆಗೆ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ಕುರಿತಂತೆ ಮಂಗಳೂರು ಸಂಚಾರಿ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.