ಚಿನ್ನವನ್ನು ಪಾಲಿಶ್ ಮಾಡುವ ನೆಪದಲ್ಲಿ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದ ಸಂಶಯದ ಮೇರೆಗೆ ಬಿಹಾರ ಮೂಲದ ಇಬ್ಬರ ವಿರುದ್ದ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳೀಯ ನಿವಾಸಿ ಕಿಶೋರ್ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸೆ.17 ರಂದು ಸಂಜೆ ವೇಳೆ ಕಿಶೋರ್ ಅವರ ಮನೆಯ ಬಳಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದಿದ್ದು, ಹಿಂದಿಯಲ್ಲಿ ಮಾತನಾಡುತ್ತಾ ನಿಮ್ಮಲ್ಲಿ ಚಿನ್ನವಿದ್ದರೆ ಕೊಡಿ ಅದನ್ನು ಪಾಲಿಶ್ ಮಾಡಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಅದಕ್ಕೆ ಕಿಶೋರ್ ಅವರು ನೀವು ಯಾವ ರೀತಿಯಲ್ಲಿ ಚಿನ್ನಪಾಲಿಶ್ ಮಾಡುತ್ತೀರಿ ಎಂದು ಕೇಳಿದಾಗ ಅವರು ತಮ್ಮಲ್ಲಿದ್ದ ಬ್ಯಾಗ್ ನಲ್ಲಿದ್ದ ದ್ರಾವಣ ಇತರ ಸಲಕರಣೆಗಳನ್ನು ತೆರೆದು ತೋರಿಸಿ ಇವುಗಳಿಂದ ಚಿನ್ನ ಪಾಲೀಶ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ವೇಳೆ ಅವರ ಮೇಲೆ ಸ್ವಲ್ಪ ಸಂಶಯ ಬಂದು ಅವರ ಹೆಸರು ಕೇಳಿದಾಗ ಅವರಲ್ಲಿ ಓರ್ವನ ಹೆಸರು ಆನಂದ ಕಿಶೋರ್ ಮೆಹ್ತಾ ಹಾಗೂ ಮತ್ತೋರ್ವ ನ ಹೆಸರು ಮನೋಜ್ ಯಾದವ್ ಎಂದು ಹೇಳಿದ್ದು, ಬಿಹಾರದಿಂದ ಬಂದಿರುವುದಾಗಿ ತಿಳಿಸಿದ್ದಾರೆ.
ಇಬ್ಬರ ನಡೆಯಿಂದ ಅನುಮಾನಗೊಂಡ ಕಿಶೋರ್ ಹಿರಿಯಡಕ ಠಾಣೆ ಮಾಹಿತಿ ನೀಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಇಬ್ಬರು ಹಿಂದಿಯಲ್ಲಿ ಕೆಟ್ಟದಾಗಿ ಬೈಯುತ್ತಾ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇವರು ಚಿನ್ನಪಾಲೀಶ್ ಮಾಡುವುದಾಗಿ ಜನರನ್ನು ನಂಬಿಸಿ ಮೋಸ ಮಾಡುವ ಉದ್ದೇಶವನ್ನು ಹೊಂದಿದ್ದಾರೆ ಎಂಬುದಾಗಿ ಕಿಶೋರ್ ಅವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.