ಧಾರವಾಡ : ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಭಾಗ ಸಂಖ್ಯೆ 94 ರ ಮತಗಟ್ಟೆ ಅಧಿಕಾರಿಯಾಗಿದ್ದ ನವೀನ ಡಿ. ಸೂರ್ಯವಂಶಿ ಅವರು ಚುನಾವಣಾ ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಕಾಳಜಿ ತೋರಿ, ಕಾರ್ಯಲೋಪ ಮಾಡಿರುವುದರಿಂದ ತಕ್ಷಣ ಸರಕಾರಿ ಸೇವೆಯಿಂದ ಅವರನ್ನು ಅಮಾನತ್ತುಗೊಳಿಸಿ, ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ಆದೇಶ ಹೊರಡಿಸಿದ್ದಾರೆ.
ನವೀನ್ ಸೂರ್ಯವಂಶಿ ಅವರು 2023 ರ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಕೆಲಸಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿ ಕರ್ತವ್ಯಲೋಪ ಮಾಡಿದ್ದಲ್ಲದೇ, ಸಕಾಲಕ್ಕೆ ಮಾಹಿತಿ, ದಾಖಲೆಗಳನ್ನು ನೀಡದೇ ಚುನಾವಣಾ ಕಾರ್ಯಕ್ಕೆ ತೊಂದರೆಯುಂಟು ಮಾಡಿದ್ದಾರೆ. ಪ್ರಜಾಪ್ರತಿನಿಧಿ ಕಾಯ್ದೆ 1951 ರ ಕಲಂ 134 ಉಲ್ಲಂಘನೆ ಮಾಡಿದ್ದರಿಂದ ಅವರನ್ನು ಸರಕಾರಿ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಲಾಗಿದೆ.
ಅಮಾನತ್ತು ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅನ್ವಯ ಜೀವನಾಂಶ ಭತ್ಯೆ ಪಡೆಯಲು ಅರ್ಹರಿದ್ದು, ತಮ್ಮ ಕಚೇರಿ ಮುಖ್ಯಸ್ಥರ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡಬಾರದೆಂದು ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.