ಪುತ್ತೂರು: ಪ್ರವೀಣ್ ನೆಟ್ಟಾರು ಹಂತಕರಿಗೆ ನೆರವು ನೀಡಿದ್ದ ಆರೋಪಿಗಳಿಬ್ಬರು ವಿದೇಶದಲ್ಲಿ ಅಡಗಿರುವ ವಿಚಾರವನ್ನು ಎನ್‌ಐಎ ಪತ್ತೆ ಹಚ್ಚಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ.
ಹಂತಕರಿಗೆ ನೆರವು ನೀಡಿದವರಿಬ್ಬರು ವಿದೇಶದಲ್ಲಿ ಅಡಗಿರುವ ಬಗ್ಗೆ ಎನ್‌ಐಎಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ ತಂಡ ಇಬ್ಬರನ್ನು ವಶಕ್ಕೆ ಪಡೆದಿದೆ. ಈ ಇಬ್ಬರು ಆರೋಪಿಗಳನ್ನು ಭಾರತಕ್ಕೆ ಕರೆ ತರುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ.ಒಟ್ಟು ಆರು ಮಂದಿ ಆರೋಪಿಗಳು ವಿದೇಶಕ್ಕೆ ಪರಾರಿಯಾಗಿದ್ದು, ಈ ಪೈಕಿ ಐವರನ್ನು ಎನ್‌ಐಎ ಈಗಾಗಲೇ ವಶಕ್ಕೆ ಪಡೆದಿದೆ ಎನ್ನಲಾಗುತ್ತಿದೆ. ಆದರೆ ಇವರೆಲ್ಲರನ್ನು ವಿದೇಶದಿಂದಲೇ ಪತ್ತೆ ಹಚ್ಚಿ ವಶಕ್ಕೆ ಪಡೆದರೇ ಅಥವಾ ಭಾರತದಲ್ಲೇ ವಶಕ್ಕೆ ಪಡೆದರೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಶರೀಫ್ ಮತ್ತು ಕೆ.ಎ. ಮಸೂದ್ ಸೌದಿಯಲ್ಲಿ ಅಡಗಿರುವ ಸುಳಿವು ಎನ್‌ಐಎಗೆ ಲಭ್ಯವಾಗಿದೆ. ಅವರನ್ನು ಪತ್ತೆ ಹಚ್ಚಿ ಭಾರತಕ್ಕೆ ಕರೆ ತರುವ ಪ್ರಯತ್ನಗಳು ನಡೆಯುತ್ತಿವೆ. ಇನ್ನೂ ಒಬ್ಬ ಆರೋಪಿ ಪತ್ತೆಯಾಗಬೇಕಿದೆ.ನಿಷೇಧಿತ ಪಿಎಫ್‌ಐ ಸದಸ್ಯರಾಗಿರುವ ಮೊಹಮ್ಮದ್ ಮುಸ್ತಫಾ ಎಸ್., ತುಫೈಲ್ ಎಂ.ಎಚ್. ಪತ್ತೆಗೆ ತಲಾ 5 ಲಕ್ಷ ರೂ., ಉಮ್ಮರ್ ಫಾರೂಕ್, ಅಬೂಬಕ್ಕರ್ ಸಿದ್ಧೀಕ್ ಪತ್ತೆಗೆ ತಲಾ 2 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿದೆ. ಶರೀಫ್ ಹಾಗೂ ಕೆ.ಎ. ಮಸೂದ್ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 10 ಲಕ್ಷ ರೂ. ಘೋಷಿಸಲಾಗಿತ್ತು.