ಬೆಂಗಳೂರು: ಕಳೆದ 5 ತಿಂಗಳ ಹಿಂದೆ ಟೊಮ್ಯಾಟೋವನ್ನು ಜೋಪಾನ ಮಾಡಲಾಗುತ್ತಿತ್ತು. ಟೊಮ್ಯಾಟೋ ಬೆಳೆದ ರೈತರು ಹೊಲಕ್ಕೆ ಸಿಸಿಟಿವಿ, ಮಾರಾಟ ಮಾಡೋಕೆ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಕ ಮಾಡಿದ್ರು. ಯಾಕಂದ್ರೆ 2023 ಸೆಪ್ಟೆಂಬರ್ ತಿಂಗಳಲ್ಲಿ ಟೊಮ್ಯಾಟೋಗೆ ಬಂಗಾರದ ರೇಟ್ ಬಂದಿತ್ತು, ಕೆಜಿಗೆ 200ರಿಂದ 300 ರೂಪಾಯಿವರೆಗೂ ಡಿಮ್ಯಾಂಡ್ ಇತ್ತು. ಈಗ ಟೊಮ್ಯಾಟೋ ರೀತಿಯಲ್ಲೇ ಬೆಳ್ಳುಳ್ಳಿ ಬೆಲೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ.
ದೇಶಾದ್ಯಂತ ಬೆಳ್ಳುಳ್ಳಿಯ ಬೆಲೆ ಹೆಚ್ಚಾಗುತ್ತಿದೆ. ಅಹಮದಾಬಾದ್ ಎಪಿಎಂಸಿಯಲ್ಲಿ ಕೆಜಿ ಬೆಳ್ಳುಳ್ಳಿಗೆ 250 ರಿಂದ 300 ರೂಪಾಯಿವರೆಗೂ ಇದೆ. ಇಷ್ಟು ಡಿಮ್ಯಾಂಡ್ ಇರೋ ಬೆಳ್ಳುಳ್ಳಿ ಮೇಲೆ ಕಳ್ಳರ ಕಣ್ಣು ಬೀಳದೇ ಇರುತ್ತಾ. ಅಹಮದಾಬಾದ್ ಎಪಿಎಂಸಿಯಲ್ಲಿ ಖದೀಮರು ಬೆಳ್ಳುಳ್ಳಿಯ ದರೋಡೆಗೆ ಇಳಿದಿದ್ದಾರೆ. ಅಹಮದಾಬಾದ್ ಎಪಿಎಂಸಿಯಲ್ಲಿ ಕಳ್ಳರು ಬರೋಬ್ಬರಿ 140 ಕೆಜಿ ಬೆಳ್ಳುಳ್ಳಿ ಮೂಟೆಯನ್ನು ಕದ್ದೊಯ್ದಿದ್ದಾರೆ. 140 ಕೆಜಿ ಬೆಳ್ಳುಳ್ಳಿ ಇಂದಿನ ಮಾರುಕಟ್ಟೆ ದರ ಬರೋಬ್ಬರಿ 35 ಸಾವಿರ ರೂಪಾಯಿ. ಇಷ್ಟು ಬೆಲೆ ಬಾಳುವ ಬೆಳ್ಳುಳ್ಳಿಯನ್ನು ಖದೀಮರು ಕಳ್ಳತನ ಮಾಡಿದ್ದಾರೆ. ವ್ಯಾಪಾರಿಯೊಬ್ಬರು ಈ ಸಂಬಂಧ ವೇಜಲಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಗುಜರಾತಿನ ಚಿಲ್ಲರೆ ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿ ಬೆಲೆ ದಿನಕಳೆದಂತೆ ಏರಿಕೆಯಾಗುತ್ತಿದೆ. ಪ್ರತಿ ಕೆಜಿಗೆ 350-400 ರೂಪಾಯಿಗೆ ಹೋಗಿದೆ. ಕೇವಲ ಗುಜರಾತ್ ಮಾತ್ರವಲ್ಲ ಪ್ರತಿಕೂಲ ಹವಾಮಾನದ ವಾತಾವರಣದಿಂದಾಗಿ ದೇಶಾದ್ಯಂತ ಬೆಳ್ಳುಳ್ಳಿಯ ಬೆಲೆ ಹೆಚ್ಚಾಗುತ್ತಿದೆ.