ಬೆಂಗಳೂರು : 42 ಕೈದಿಗಳ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡುವ ಕುರಿತು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಕಾನೂನು ಸಚಿವ ಜೆ,ಸಿ ಮಾಧುಸ್ವಾಮಿ ಮಾತನಾಡಿದ್ದು, ಗಣರಾಜ್ಯೋತ್ಸವದ ಹಿನ್ನೆಲೆ ಸನ್ನಡತೆ ಆಧಾರದ ಮೇಲೆ 42 ಕೈದಿಗಳ ಬಿಡುಗಡೆಗೆ ರಾಜ್ಯಪಾಲರ ಶಿಫಾರಸ್ಸು ಮಾಡಲು ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದ್ದಾರೆ. ಈ ಮೂಲಕ ರಾಜ್ಯದ 42 ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಗಲಿದೆ.
ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗ
ಒಲಂಪಿಕ್ಸ್, ಕಾಮನ್ ವೆಲ್ತ್, ಏಷ್ಯನ್ ಗೇಮ್ಸ್ ಪದಕವಿಜೇತರಿಗೆ ಸರ್ಕಾರಿ ಹುದ್ದೆ ನೀಡುವ ತೀರ್ಮಾನಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಲಂಪಿಕ್ಸ್, ಕಾಮನ್ ವೆಲ್ತ್, ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಸರ್ಕಾರಿ ಹುದ್ದೆ ನೀಡುವ ನಿರ್ಧಾರಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಎಬಿಸಿ ಗ್ರೂಪ್ ನಡಿ ಹುದ್ದೆ ನೀಡಲಾಗುತ್ತದೆ ಎಂದು ಸಚಿವ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.
ಕ್ರೀಡಾಪಟುಗಳಿಗೆ ಸರ್ಕಾರದ ಉದ್ಯೋಗ ನೀಡುವ ನೀತಿ ಘೋಷಿಸಿದ್ದ ಸಿಎಂ
ಕ್ರೀಡಾ ಇಲಾಖೆಯ ಅಪರಮುಖ್ಯಕಾರ್ಯದರ್ಶಿಗಳ ನೇತೃತ್ವದ ಆಯ್ಕೆ ಸಮಿತಿಯ ಮೂಲಕ ಕ್ರೀಡಾಪಟುಗಳಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡುವ ಯೋಜನೆಗೆ ಮುಂದಿನ ಸಚಿವಸಂಪುಟದಲ್ಲಿ ಅನುಮೋದನೆ ನೀಡಿ, ಪದವೀಧರರಾದ ಒಲಂಪಿಕ್ಸ್ ಹಾಗೂ ಪ್ಯಾರಾಒಲಂಪಿಕ್ಸ್ ಪದಕವಿಜೇತರಿಗೆ ಗ್ರೂಪ್ ಎ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಘೋಷಿಸಿದ್ದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಏಕಲವ್ಯ ಕ್ರೀಡಾ ಪ್ರಶಸ್ತಿ ಹಾಗೂ ಇತರ ಕ್ರೀಡಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿ, ಪದವೀಧರರಾಗಿರುವ ಏಷಿಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ ಪದಕ ವಿಜೇತರಿಗೆ ಗ್ರೂಪ್ ಬಿ ಉದ್ಯೋಗ, ಇದಕ್ಕಿಂತ ಕಡಿಮೆ ಸ್ತರದ ಕ್ರೀಡಾಕೂಟದ ಪದಕವಿಜೇತರಿಗೆ ಗ್ರೂಪ್ ಸಿ ಹಾಗೂ ಗ್ರೂಪ್ ಡಿ ಉದ್ಯೋಗವನ್ನು ನೀಡಲಾಗುವುದು. ಕ್ರೀಡಾಪಟುಗಳಿಗೆ ಸರ್ಕಾರದ ಉದ್ಯೋಗ ನೀಡುವ ನೀತಿ ಕರ್ನಾಟಕದ ಹೊರತು ಬೇರೆ ಯಾವುದೇ ರಾಜ್ಯದಲ್ಲಿಲ್ಲ ಎಂದು ಹೇಳಿದ್ದರು.
ಮುಂದಿನ ದಿನಗಳಲ್ಲಿ ಯುವನೀತಿಯನ್ನು ತರಲಾಗುವುದು. ಯುವಜನತೆಯ ಸಬಲೀಕರಣ ಹಾಗೂ ಕ್ರೀಡಾ ಬೆಳವಣಿಗೆ ಪ್ರಮುಖವಾಗಿದ್ದು, ಇವೆರಡಕ್ಕೂ ಸಮಾನ ಮಹತ್ವವನ್ನು ನೀಡುವಂತಹ ನೀತಿಯನ್ನು ರೂಪಿಸಲಾಗುತ್ತಿದೆ.ಕ್ರೀಡೆಗೆ ದೇಹದ ಹಾಗೂ ಮನಸ್ಸಿನ ಆರೋಗ್ಯದ ಜೊತೆಗೆ ಗೆಲ್ಲಲೇಬೇಕೆಂದು ಆಡುವುದು ಬಹಳ ಮುಖ್ಯ. ಕೇವಲ ಸೋಲಬಾರದು ಎಂದು ಆಡುವ ಭಾವನೆ ಕ್ರೀಡಾಪಟುಗಳಲ್ಲಿರಬಾರದು. ಗೆಲ್ಲಲೇಬೇಕೆಂಬ ಸಕಾರಾತ್ಮಕ ಭಾವನೆಯಿಂದ ಆಡಿದರೆ ಗೆಲುವು ನಿಮ್ಮದಾಗುತ್ತದೆ. ರಾಜ್ಯ ಸರ್ಕಾರ ಕ್ರೀಡೆಗಳಿಗೆ, ಕ್ರೀಡಾಪಟುಗಳಿಗೆ ಬಹಳ ಮಹತ್ವ ನೀಡುತ್ತಿದೆ. ಗೃಹ ಇಲಾಖೆಯ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಶೇ.2 ರ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರದಲ್ಲಿ ಕ್ರೀಡೆಗಳಿಗೆ ಪ್ರಾಶಸ್ತ್ಯ ನೀಡುವ ನಾಯಕರು, ಆಡಳಿತಗಾರರು ನಮ್ಮಲ್ಲಿದ್ದಾರೆ. ಇದರಿಂದಾಗಿ ಕ್ರೀಡೆಗೆ ಉತ್ತೇಜನ ನೀಡುವಂತಹ ನೀತಿಗಳನ್ನು ಜಾರಿಗೆ ತರಲು ಸಾಧ್ಯವಾಗಿದೆಎಂದು ಹೇಳಿದ್ದರು.