ಬೆಂಗಳೂರು: ಕೆಲ ದಿನಗಳ ಹಿಂದೆ ನೈಟ್ ಶಿಫ್ಟ್ ಕೆಲಸ ಮುಗಿಸಿಕೊಂಡು, ಮುಂಜಾನೆ ಬೈಕ್ ಟ್ಯಾಕ್ಸಿಯಲ್ಲಿ ಖಾಸಗೀ ಕಂಪನಿ ಉದ್ಯೋಗಿಯೊಬ್ಬರು ಮನೆಗೆ ತೆರಳುತ್ತಿದ್ದರು. ಅವರನ್ನು ತಡೆದಿದ್ದಂತ ಬಂಡೇಪಾಳ್ಯ ಪೊಲೀಸ್ ಠಾಣೆಯ ಪೇದೆಗಳು, ಅವರ ಬ್ಯಾಗ್ ನಲ್ಲಿ ಗಾಂಜಾ ಇಟ್ಟು, ಕೇಸ್ ಹಾಕುವುದಾಗಿ ಬೆದರಿಸಿ ಹಣ ಪೀಕಿದ್ದರು.
ಈ ಪ್ರಕರಣ ಸಂಬಂಧ ಇಬ್ಬರು ಕಾನ್ಸ್ ಸ್ಟೇಬಲ್ ಗಳನ್ನು ಅಮಾನತುಗೊಳಿಸಲಾಗಿದೆ.
ಕಳೆದ ಜನವರಿ 11ರಂದು ಮುಂಜಾನೆ 3.50ರ ಸುಮಾರಿಗೆ ಹೆಚ್ ಎಸ್ ಆರ್ ಲೇಔಟ್ ಬಳಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಂತ ಹಿಮಾಚಲ ಪ್ರದೇಶ ಮೂಲಕ ಖಾಸಗೀ ಕಂಪನಿ ಉದ್ಯೋಗಿ ವೈಭವ್ ಎಂಬುವರನ್ನು ಬಂಡೇಪಾಳ್ಯ ಪೊಲೀಸ್ ಠಾಣೆಯ ಇಬ್ಬರು ನೈಟ್ ಶಿಫ್ಟ್ ಪೇದೆಗಳು ತಡೆದಿದ್ದರು.
ಬೈಕ್ ಟ್ಯಾಕ್ಸಿಯಲ್ಲಿ ಮನೆಗೆ ತೆರಳುತ್ತಿದ್ದಂತ ಅವರ ಬ್ಯಾಗ್ ಪರಿಶೀಲಿಸಿ, ಗಾಂಜಾ ಅವರೇ ಇಟ್ಟು, ನೀನು ಗಾಂಜಾ ಸೇವಿಸುತ್ತೀಯ ಎಂಬುದಾಗಿ ಹೆದರಿಸಿದ್ದರು. ಅಲ್ಲದೇ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದರು.
ಆದ್ರೇ ಗಾಂಜಾ ಅಭ್ಯಾಸ, ಸೇವನೆ ಇಲ್ಲದಂತ ವೈಭವ್ ನನಗೆ ಇದ್ಯಾವುದೇ ಅಭ್ಯಾಸವಿಲ್ಲ. ಕೆಲಸ ಮುಗಿಸಿ ಮನೆಗೆ ತೆರಳುತ್ತಿರೋದಾಗಿ ಹೇಳಿದರು, ಪೊಲೀಸ್ ಪೇದೆಗಳು ಮಾತ್ರ ಬಿಟ್ಟಿರಲಿಲ್ಲ. ಆಗ ಅವರನ್ನು ನನ್ನ ಬಿಡೋದಕ್ಕೆ ಏನು ಮಾಡಬೇಕು ಎಂದು ಕೇಳಿದ್ದರು. ಈ ವೇಳೆ ನಿನ್ನ ಬಳಿ ಎಷ್ಟು ಹಣ ಇದೆ ಕೊಡು ಎಂದಾಗ 2,500 ಇರೋದಾಗಿ ಹೇಳಿ, ಪರ್ಸ್ ತೆಗೆದು ಕೊಟ್ಟಿದ್ದರು.
ಇಷ್ಟಕ್ಕೇ ಸುಮ್ಮನಾಗದೇ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಎಟಿಎಂ ಕಾರ್ಡ್ ನಿಂದ ಬಿಡಿಸಿಕೊಡುವಂತೆಯೂ ಹೇಳಿದ್ದರು. ಆದ್ರೇ ವೈಭವ್ ನನ್ನ ಬಳಿಯಲ್ಲಿ ಎಟಿಎಂ ಕಾರ್ಡ್ ಇಲ್ಲ. ಯುಪಿಎ ಮಾಡುವುದಾಗಿ ಹೇಳಿದಾಗ ಅದಕ್ಕೆ ಒಪ್ಪಿರಲಿಲ್ಲ. ಕೊನೆಗೆ 2,500 ಹಣ ಪಡೆದು ಕಳುಹಿಸಿದ್ದರು.
ಈ ಎಲ್ಲಾ ಘಟನೆಯನ್ನು ವೈಭವ್ ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಸರಣಿ ಟ್ವಿಟ್ ನಲ್ಲಿ ತಿಳಿಸಿದ್ದರು. ಇದಕ್ಕೆ ಟ್ವಿಟ್ ನಲ್ಲೇ ಉತ್ತರಿಸಿದ್ದಂತ ಡಿಸಿಪಿ ಸಿ.ಕೆ ಬಾಬು ಅವರು, ತಮ್ಮ ಕಚೇರಿಗೆ ಬಂದು ದೂರು ನೀಡುವಂತೆ ತಿಳಿಸಿದ್ದರು. ಅಲ್ಲದೇ ಈ ಪ್ರಕರಣವನ್ನು ತನಿಖೆಗೂ ಆದೇಶಿಸಿದ್ದರು.
ತನಿಖೆಯ ಬಳಿಕ ಬಂಡೇಪಾಳ್ಯ ಪೊಲೀಸ್ ಠಾಣೆಯ ಪೇದೆಗಳಾದಂತ ಮಲ್ಲೇಶ್ ಹಾಗೂ ಕೀರ್ತಿ ಕುಮಾರ್ ಎಂಬುವರು ವೈಭವ್ ನಿಂದ ಹಣ ಸುಲಿಗೆ ಮಾಡಿರೋದಾಗಿ ತಿಳಿದು ಬಂದ ಕಾರಣ, ಇಂದು ಇಬ್ಬರು ಪೇದೆಗಳನ್ನು ಅಮಾನತುಗೊಳಿಸಿ, ಆದೇಶಿಸಲಾಗಿದೆ. ಈ ಮೂಲಕ ಖಾಸಗೀ ಕಂಪನಿ ಉದ್ಯೋಗಿಯನ್ನು ಸುಲಿಗೆ ಮಾಡಿದಂತ ಇಬ್ಬರು ಪೊಲೀಸರಿಗೆ ಶಿಕ್ಷೆಯಾದಂತೆ ಆಗಿದೆ.