ಮಂಗಳೂರು: ನಗರದ ಹೊರವಲಯದ ಫರಂಗಿಪೇಟೆ ನಿವಾಸಿ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿ 10 ದಿನಗಳಾದರೂ ಆತನ ಇರುವಿಕೆಯ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ.
ಆದ್ದರಿಂದ ದಿಗಂತ್ ಪೋಷಕರು ಸದ್ಯ ಹೈಕೋರ್ಟ್ ಮೊರೆ ಹೋಗಿದ್ದಾರೆ. ಪುತ್ರನನ್ನು ಶೀಘ್ರವಾಗಿ ಪತ್ತೆಹಚ್ಚಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ. ದಿಗಂತ್ ತಂದೆ ಪದ್ಮನಾಭ್ ಅವರು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಜಸ್ಟೀಸ್ ವಿ.ಕಾಮೇಶ್ವರ್ ರಾವ್, ಜಸ್ಟೀಸ್ ಟಿ.ಎಂ.ನಡಾಫ್‌ರಿಂದ ಹೈಕೋರ್ಟ್ ದ್ವಿಸದಸ್ಯ ವಿಭಾಗೀಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆದಿದೆ. ಮಾರ್ಚ್ 12ರೊಳಗೆ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ದ್ವಿಸದಸ್ಯ ವಿಭಾಗೀಯ ಪೀಠ ಪೊಲೀಸರಿಗೆ ಆದೇಶಿಸಿ ಮಾರ್ಚ್ 13ಕ್ಕೆ ವಿಚಾರಣೆ ಮುಂದೂಡಿದೆ.
ಬಂಟ್ವಾಳದ ಫರಂಗಿಪೇಟೆ ಕಿದೆಬಿಟ್ಟು ನಿವಾಸಿ ದಿಗಂತ್, ಫೆ.25ರ ಸಂಜೆ ಫರಂಗಿಪೇಟೆ ಅಂಜನೇಯ ವ್ಯಾಯಾಮ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದವನು, ದೇವಸ್ಥಾನಕ್ಕೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದ. ಆತ ಕಾಣದಿದ್ದಾಗ ಹುಡುಕಾಟ ನಡೆಸಿದಾಗ ಫರಂಗಿಪೇಟೆಯ ರೈಲ್ವೆ ಹಳಿಯಲ್ಲಿ ದಿಗಂತ್ ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿತ್ತು. ಒಂದು ಚಪ್ಪಲಿಯಲ್ಲಿ ರಕ್ತದ ಕಲೆ ಕಂಡುಬಂದಿತ್ತು. ಐದು ದಿನವಾದರೂ ಆತನ ಸುಳಿವು ಸಿಕ್ಕಿಲ್ಲ ಮಾರ್ಚ್ 1ರಂದು ಫರಂಗಿಪೇಟೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿತ್ತು. ಬಳಿಕ ಪೊಲೀಸರು ಏಳು ತನಿಖಾ ತಂಡಗಳನ್ನು ರಚಿಸಿ ತನಿಖೆಯನ್ನು ಆರಂಭಿಸಿದ್ದರು.
