ಮಂಡ್ಯ: ಸರ್ಕಾರಿ ಕೆಲಸ ಬಿಟ್ಟು ಸನ್ಯಾಸತ್ವ ಸ್ವೀಕರಿಸಲು ಮಂಡ್ಯ ಅಪರ ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ. ಎಡಿಸಿಯ ಈ ನಡೆ ಜನರಲ್ಲಿ ಅಚ್ಚರಿ ಮೂಡಿಸಿದೆ. ಮಂಡ್ಯ ಅಪರ ಜಿಲ್ಲಾಧಿಕಾರಿ ಹೆಚ್.ಎಲ್.ನಾಗರಾಜು ಅವರು ಕೆಲವೇ ದಿನಗಳಲ್ಲಿ ಕೆಲಸ ಬಿಟ್ಟು ನಿವೃತ್ತಿ ಪಡೆದು ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ.
ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಕೆಲಸಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಳಿಕ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದಲ್ಲಿ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಲಿದ್ದಾರೆ. ಚಂದ್ರಶೇಖರನಾಥಶ್ರೀ ಶಿಷ್ಯರಾಗಿ ಮುಂದುವರೆಯಲಿದ್ದಾರೆ. ಈ ಹಿಂದೆಯೂ ಹೆಚ್.ಎಲ್.ನಾಗರಾಜು ಸನ್ಯಾಸತ್ವ ಸ್ವೀಕರಿಸಿದ್ದರು. 2011ರಲ್ಲಿ ಆದಿಚುಂಚನಗಿರಿ ಮಠದಲ್ಲಿ ಸ್ವಾಮೀಜಿಯಾಗಿ ದೀಕ್ಷೆ ಪಡೆದಿದ್ದರು. ‘ನಿಶ್ಚಲಾನಂದನಾಥ’ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದರು. ತಹಶೀಲ್ದಾರ್ ಹುದ್ದೆ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದರು. ಆದರೆ ಹಿತೈಷಿಗಳು, ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಸನ್ಯಾಸತ್ವ ತ್ಯಜಿಸಿ ಅಧಿಕಾರಿಯಾಗಿದ್ದರು. ಇದೀಗ ಮತ್ತೆ ಕಾವಿ ಧರಿಸಲು ನಿರ್ಧರಿಸಿರುವ ಹೆಚ್.ಎಲ್ ನಗರಾಜು, ಮತ್ತೆ ಸನ್ಯಾಸತ್ವ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.