ಮಂಗಳೂರು: ಹನ್ನೊಂದು ವರ್ಷಗಳಿಂದ ಸರ್ಕಾರ ನನಗೆ ನೀಡಿದ್ದ ಗನ್ ಮ್ಯಾನ್ ಭದ್ರತೆಯನ್ನು ಚುನಾವಣೆ ಘೋಷಣೆಯಾದ ದಿನದಿಂದ ವಾಪಸ್ ಪಡೆಯಲಾಗಿದ್ದು ಭಯದಿಂದ ಬದುಕಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದ್ದಾರೆ. ತಾಯಿ ಜತೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 2012 ರಲ್ಲಿ ಅಕಾಡೆಮಿ ಅಧ್ಯಕ್ಷನಾಗಿದ್ದಾಗ ಏಳು ಮಂದಿಯ ತಂಡ ಕಚೇರಿಗೆ ನುಗ್ಗಿ ಯದ್ವಾತದ್ವಾ ಕೊಚ್ಚಿ ಕೊಲೆಯತ್ನ ನಡೆಸಿತ್ತು. ಅದರಲ್ಲಿ ಇಬ್ಬರು ಆರೋಪಿಗಳ ಆರೋಪ ಸಾಬೀತಾಗಿ ನ್ಯಾಯಾಲಯ ನಾಲ್ಕೂವರೆ ವರ್ಷ ಸಜೆ ವಿಧಿಸಿದೆ. ಆರೋಪಿಗಳು ಇದರ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಅಲ್ಲಿ ತೀರ್ಪು ಬರುವ ಮೊದಲೇ ಗನ್ ಮ್ಯಾನ್ ಭದ್ರತೆ ವಾಪಸ್ ಪಡೆದುಕೊಳ್ಳಲಾಗಿದೆ. ಇದರಿಂದ ಭಯ ಮತ್ತು ನನಗೆ ಆತಂಕ ನನ್ನನ್ನು ಕಾಡುತ್ತಿದೆ ಎಂದರು. ನನ್ನ ತಾಯಿಯವರ ಮನವೊಲಿಸಿ ಪ್ರಕರಣವನ್ನು ಹಿಂದಕ್ಕೆ ಪಡೆಯಲು ಆರೋಪಿಗಳು ಪ್ರಯತ್ನಿಸಿದ್ದಾರೆ. ಅಷ್ಟೇ ಅಲ್ಲ ನನ್ನ ಗನ್‌ಮ್ಯಾನ್‌ಗೂ ಬೆದರಿಕೆ ಹಾಕಿದ್ದರು. ಇಷ್ಟೆಲ್ಲಾ ಇದ್ದರೂ ನನ್ನ ಗನ್‌ಮ್ಯಾನ್ ಹಿಂದಕ್ಕೆ ಪಡೆದುಕೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದದ ರಹೀಂ ಉಚ್ಚಿಲ್ ನನಗೆ ಬಂದ ಹಲವಾರು ಬೆದರಿಕೆ ಕರೆಯನ್ನು ನಾನು ಗಣನೆಗೆ ತೆಗೆದು ಕೊಳ್ಳದಿದ್ದರೂ ,ಅತ್ಯಂತ ಗಂಭೀರ ವಾದ ಆಧಾರ ಸಹಿತವಾದ ಸುಮಾರು 30 ಕಿಂತಲೂ ಅಧಿಕ ದೂರು ಮಂಗಳೂರು ದಕ್ಷಿಣ ಠಾಣೆ ,ಹುಬ್ಬಳ್ಳಿ ಮುಂತಾದಕಡೆ ದಾಖಲಾಗಿದೆ . ಬೇರೆ ಬೇರೆ ಪೊಲೀಸ್ ಆಯುಕ್ತರ ನಿರ್ದೇಶನದಂತೆ ನನ್ನ ಕುರಿತು ಬೆದರಿಕೆ ಕರೆ ಸ್ವೀಕರಿಸಿದ ನನ್ನ ಗನ್ ಮ್ಯಾನ್ ಗಳೂ ವಾಯ್ಸ್ ಸಂದೇಶ ಸಹಿತ ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಎಲ್ಲಾ ತನಿಖೆ ಪ್ರಗತಿಯಲ್ಲಿರುವಾಗಲೇ ನನ್ನ ಗನ್ ಮ್ಯಾನ್ ಭದ್ರತೆ ಹಿಂಪಡೆದಿದ್ದು ಆಶ್ಚರ್ಯ ಹಾಗೂ ಭಯವನ್ನುಂಟು ಮಾಡಿದೆ ಎಂದರು. ನನಗೆ ಗನ್ ಮ್ಯಾನ್ ಭದ್ರತೆ ಮುಂದುವರೆಸುವಂತೆ ಡಿಸಿಪಿಯವರಿಗೆ ಮನವಿ ಮಾಡಿದ್ದೇನೆ. ಆದರೂ ಪ್ರಯೋಜನವಾಗಿಲ್ಲ. ನನ್ನ ಜೀವಕ್ಕೆ ಅಪಾಯ ಸಂಭವಿಸಿದರೆ ಯಾರೂ ಕಾರಣರಲ್ಲ, ನನ್ನ ಆಯುಷ್ಯವೇ ಕಾರಣವಾಗಿರುತ್ತದೆ ಎಂದು ಮಾರ್ಮಿಕವಾಗಿ ರಹೀಂ ಉಚ್ಚಿಲ್ ಹೇಳಿದ್ದಾರೆ.