ಸುರತ್ಕಲ್: ಸಾಮಾಜಿಕ ಜಾಲತಾಣದಲ್ಲಿ ಚಿನ್ನ ಹಾಗೂ ಹಣಕ್ಕಾಗಿ ಉದ್ಯಮಿಯೋರ್ವರಿಗೆ ಖಾಸಗಿ ಮಾಹಿತಿಯನ್ನು ಬಹಿರಂಗಗೊಳಿಸುವ ಬೆದರಿಕೆಯನ್ನೊಡ್ಡಿದ್ದ ಆರೋಪದ ಮೇರೆಗೆ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ರಾಜೇಶ್ ಪವಿತ್ರನ್, ಕಾವೂರು ನಿವಾಸಿ ಸುರೇಶ್ ಎಂಬವರು ಸುರತ್ಕಲ್‌ನಲ್ಲಿ ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸಲು ಮುಂದಾಗಿದ್ದರು. ಆದರೆ, ರಾಜೇಶ್ ಪವಿತ್ರನ್ ನಡೆಸುತ್ತಿದ್ದ ಅವ್ಯವಹಾರಗಳು ಗಮನಕ್ಕೆ ಬಂದ ಕಾರಣ ಆತನೊಂದಿಗೆ ಪಾಲುದಾರಿಕೆಯಿಂದ ಹೊರ ಬರಲು ಬಯಸಿದ್ದಾಗಿ ಪೊಲೀಸರಿಗೆ ಸುರೇಶ್ ಅವರು ತಿಳಿಸಿದ್ದಾರೆ. ಇದುವೆ ರಾಜೇಶ್ ಪವಿತ್ರನ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.ಇದರಿಂದ ಆಕ್ರೋಶಗೊಂಡ ಆರೋಪಿ ರಾಜೇಶ್ ಪವಿತ್ರನ್, ಸುರೇಶ್ ಅವರ ಲ್ಯಾಪ್ ಟಾಪ್ ವಶಕ್ಕೆ ಪಡೆದು ಹೆಚ್ಚುವರಿ ಹಣ ನೀಡಬೇಕು, ಇಲ್ಲದಿದ್ದಲ್ಲಿ ಅದರಲ್ಲಿದ್ದ ಎಲ್ಲಾ ಖಾಸಗಿ ಮಾಹಿತಿಗಳನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆಯೊಡ್ಡಿದ್ದ. ಅಲ್ಲದೆ, ಕೈ, ಕಾಲು ಕಡಿದುಹಾಕುವುದಾಗಿ ಬೆದರಿಕೆ ಹಾಕಿದ್ದ ಎಂದು ಸುರೇಶ್ ಅವರು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದರು.ಸುರೇಶ್ ಅವರ ದೂರು ದಾಖಲಿಸಿಕೊಂಡ ಪೊಲೀಸರು, ರಾಜೇಶ್ ಪವಿತ್ರನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.