ಕಾರ್ಕಳ: ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ (34) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ರಾಕೇಶ್ ಮೆಹಂದಿ ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಆಗಿದೆ. ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮೇ 11ರಂದು ತಡರಾತ್ರಿ ಮಿಯ್ಯಾರು ಎಂಬಲ್ಲಿ ತನ್ನ ಗೆಳೆಯನ ಮೆಹೆಂದಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುತ್ತಿದ್ದ ಸಂದರ್ಭ ರಾಕೇಶ್ ಪೂಜಾರಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಕಾರ್ಕಳ ಗಾಜ್ರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಬಳಿಕ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆಗಾಗಲೇ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ ಹೊಂದಿದರು ಎಂದು ತಿಳಿದುಬಂದಿದೆ. ಮೃತರು ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಮುಕ್ತ ಸುದ್ದಿ ವಾಹಿನಿಯಲ್ಲಿ ಕಾಮಿಡಿ ಶೋ ನಡೆಸುತ್ತಿದ್ದ ರಾಕೇಶ್ ಪೂಜಾರಿ ಅವರು ಪ್ರಶಂಸ ನಾಟಕ ತಂಡದಲ್ಲಿ ಕಲಾವಿದರಾಗಿದ್ದರು. ಕಿರುತೆರೆಯಲ್ಲಿ ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಪ್ರಸಿದ್ಧರಾಗಿದ್ದರು.
ರಂಗಭೂಮಿ ಮತ್ತು ಕಿರುತೆರೆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ರಾಕೇಶ್ ಪೂಜಾರಿ ಅವರು ಅದ್ಭುತ ಹಾಸ್ಯ ಪ್ರತಿಭೆಯಿಂದ ಜನರ ಮನ ಗೆದ್ದಿದ್ದರು. ರಾಕೇಶ್ ಪೂಜಾರಿ ಸಾವಿನ ವಿಚಾರವನ್ನು ನಟ ಹಾಗೂ ಅವರ ಆಪ್ತ ಶಿವರಾಜ್ ಕೆ.ಆರ್ ಪೇಟೆ ಅವರು ಖಚಿತಪಡಿಸಿದ್ದಾರೆ. ಸಾವಿಗೆ ಅವರ ಆಪ್ತ ಬಳಗ ಶಾಕ್ ಆಗಿದೆ.
ವಿಶ್ವರೂಪ್ ಎಂದೇ ರಾಕೇಶ್ ಪೂಜಾರಿ ಜನಪ್ರಿಯತೆ ಪಡೆದಿದ್ದರು. ಅವರು ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಇದ್ದರು. ಆದರೆ, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಅವರ ಬದುಕನ್ನು ಬದಲಿಸಿತು. ‘ಕಾಮಿಡಿ ಕಿಲಾಡಿಗಳು’ ಮೂರನೇ ಸೀಸನ್ನಲ್ಲಿ ಅವರು ವಿನ್ನರ್ ಆಗಿದ್ದರು. ಹಲವು ವರ್ಷಗಳಿಂದಲೂ ಅವರು ರಂಗಭೂಮಿ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು.
2018ರಲ್ಲಿ ಝೀ ಕನ್ನಡ ಕಾಮಿಡಿ ಕಿಲಾಡಿಗಳು ಸೀಸನ್-2ಗೆ ಅವರು ಆಯ್ಕೆ ಆಗಿ ರನ್ನರ್ ಅಪ್ ತಂಡದಲ್ಲಿ ಅವರು ಇದ್ದರು. ನಂತರದ ಸೀಸನ್ನಲ್ಲಿ ಅವರು ವಿನ್ನರ್ ಆದರು. ಕನ್ನಡದ ‘ಪೈಲ್ವಾನ್’, ‘ಇದು ಎಂಥಾ ಲೋಕವಯ್ಯ’ ತುಳು ಭಾಷೆಯ ‘ಪೆಟ್ಕಮ್ಮಿ’, ‘ಅಮ್ಮೆರ್ ಪೊಲೀಸ್’ ಮೊದಲಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.
ಅವರ ರಕ್ತದಲ್ಲಿ ಪ್ಲೇಟ್ಲೆಟ್ಸ್ ಕಡಿಮೆ ಇತ್ತು. ಕಾಂತಾರ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬಂದವರು ಬಳಿಕ ಸಂಜೆ ಸುಸ್ತು ಎನ್ನುತ್ತಿದ್ದರು. ಆದರೂ ಸ್ನೇಹಿತನ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.