ಕಾಸರಗೋಡು: ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿ ಚಾಲಕರಿಗೆ ರಿವಾಲ್ವರ್ ತೋರಿಸಿ ಎರಡು ಲಾರಿಗಳನ್ನು ಅಪಹರಿಸಿದ ಘಟನೆ ಬುಧವಾರ ಕರ್ನಾಟಕ ಕೇರಳ ಗಡಿಯ ಮೀಯಪದವಿನಲ್ಲಿ ನಡೆದಿದ್ದು, ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಮಂಜೇಶ್ವರ ಪೊಲೀಸರು ಬೇಧಿಸಿ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ನಾಸಿಕ್ ನ ರಾಕೇಶ್ ಕಿಶೋರ್ (25), ಸೋಂಕಾಲಿನ ಹೈದರ್ ಅಲಿ (22), ಪೈವಳಿಕೆ ಕಳಾಯಿಯ ಸಯಾಫ್ (22), ಮೀಯಪದವು ಮುಹಮ್ಮದ್ ಸಫ್ವಾನ್ (23) ಬಂಧಿತರು. ಈ ವೇಳೆ ಮತ್ತಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಆರಂಭವಾಗಿದೆ. ಬಂಧಿತರಿಂದ ಅಪಹರಣಗೊಂಡ ಎರಡು ಲಾರಿ, ಪಿಸ್ತೂಲ್, ನಾಲ್ಕು ಸಜೀವ ಗುಂಡುಗಳು, ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ವಿವರ ಬುಧವಾರ ಸಂಜೆ 6 ಗಂಟೆಯ ವೇಳೆ ಮೀಯಪದವು ಬೆಜ್ಜದಲ್ಲಿ ಬರುತ್ತಿದ್ದ ಎರಡು ಲಾರಿಯನ್ನು ಪಿಸ್ತೂಲು ತೋರಿಸಿ ಅಡ್ಡಗಟ್ಟಿ ಕೆಳಗಿಳಿಸಿ ಮೊಬೈಲ್, ಹಣವನ್ನು ದೋಚಿ ಲಾರಿಗಳನ್ನು ಅಪಹರಿಸಿದ್ದರು. ಈ ಬಗ್ಗೆ ತಕ್ಷಣ ಮಾಹಿತಿ ಪಡೆದ ಮಂಜೇಶ್ವರ ಪೊಲೀಸರು ಲಾರಿಗಳನ್ನು ಬೆನ್ನಟ್ಟಿದ್ದಾಗ ಪೈವಳಿಕೆ ಕೊಮ್ಮಂಗಳ ಬಳಿ ಎರಡು ಲಾರಿಗಳನ್ನು ಬಿಟ್ಟು ಪರಾರಿಯಾಗಲೆತ್ನಿಸಿದ್ದಾರೆ. ತಕ್ಷಣ ಇಬ್ಬರನ್ನು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 25ಕ್ಕೂ ಅಧಿಕ ಪ್ರಕರಣಗಳಲ್ಲಿ ಶಾಮೀಲಾಗಿ ಕಾಫಾ ಕಾಯ್ದೆಯಂತೆ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಗೊಂಡಿದ್ದ ಮೀಯಪದವಿನ ಅಬ್ದುಲ್ ರಹೀಂ ನ ನೇತೃತ್ವದಲ್ಲಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.