ಬಂಟ್ವಾಳ: ಹೇಳಿಕೆಗಳ ಮೂಲಕ ಪ್ರಸಿದ್ಧ ಪಡೆದಿದ್ದ ಎಸ್‌ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಅವರ ಬಿ.ಸಿ.ರೋಡಿನ ಕೈಕಂಬದಲ್ಲಿರುವ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳ ತಂಡ ಗುರುವಾರ ಬೆಳಗ್ಗೆ ದಾಳಿ ನಡೆಸಿದೆ. ಇದೇ ವೇಳೆ ಸ್ಥಳೀಯ ಎಸ್‌ಡಿಪಿಐ ಮುಖಂಡರು ಮನೆ ಮುಂದೆ ಜಮಾಯಿಸಿದ್ದು, ‘ಗೋ ಬ್ಯಾಕ್’ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಬೆಳ್ಳಾರೆ ನಿವಾಸಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಸಂಬಂಧ ಎರಡು ದಿನಗಳ ಹಿಂದೆ ಏಕಕಾಲದಲ್ಲಿ ಸುಮಾರು 33 ಕಡೆಗೆ ದ.ಕ.ಜಿಲ್ಲೆಯ ಎಸ್.ಡಿ.ಪಿ.ಐ. ಹಾಗೂ ಇತರ ಸಂಘಟನೆಗಳ ಪ್ರಮುಖರ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದ ಎನ್.ಐ.ಎ, ದಾಳಿ ಮುಂದುವರಿಸಿದೆ. ಸುಮಾರು ಐವತ್ತಕ್ಕೂ ಅಧಿಕ ಎಸ್.ಡಿ.ಪಿ.ಐ ಕಾರ್ಯಕರ್ತರು ಮನೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಕಳೆದ ಕೆಲ ದಿನಗಳಿಂದ ಎನ್.ಐ. ಎ. ಸಕ್ರಿಯವಾಗಿ ವಿವಿಧೆಡೆ ದಾಖಲೆ ಪರಿಶೀಲನೆಗಾಗಿ ಭೇಟಿ ನೀಡುತ್ತಿದ್ದು, ಇದು ಅದರ ಪ್ರಕ್ರಿಯೆಯ ಮುಂದುವರಿದ ಭಾಗವಾಗಿದೆ ಎನ್ನಲಾಗಿದೆ.