ಕುಂಬಳೆ: ನಗರದ ತರವಾಡು ಮನೆಗೆ ನುಗ್ಗಿದ ಕಳ್ಳರು ಬೇರೆ ಬೇರೆ ದೈವಗಳ ಆಯುಧ, ಚಿನ್ನಾಭರಣ, ಬೆಳ್ಳಿ, ತಾಮ್ರ, ಹಿತ್ತಾಳೆಯ ವಿವಿಧ ವಸ್ತುಗಳು, ಹಣವನ್ನು ಎಗರಿಸಿದ ಘಟನೆ ಸಂಭವಿಸಿದೆ.
ಕುಂಬಳೆ ಪೇಟೆಯಲ್ಲಿರುವ ಶಬರ ಶಂಕರ ಸೇವಾ ಸಮಿತಿಯ ಕುನ್ನಿಲ್ಪಾರ ತರವಾಡು ಕ್ಷೇತ್ರ ಹಾಗೂ ತರವಾಡು ಮನೆಯಿಂದ ಚಿನ್ನಾಭರಣ, ಭಂಡಾರ ಸಹಿತ ವಿವಿಧ ಸೊತ್ತುಗಳು ಕಳವಿಗೀಡಾಗಿದೆ.
ಚಿನ್ನದಿಂದ ತಯಾರಿಸಲಾದ ಒಂದು ಹೂವು, ಹಾಗೂ ಕತ್ತಿ ಕಳವಿಗೀಡಾಗಿದೆ. ತರವಾಡು ಕ್ಷೇತ್ರದಿಂದ ಶ್ರೀ ವಯನಾಟು ಕುಲವನ್ ದೈವದ ಬೆಳ್ಳಿಯಿಂದ ತಯಾರಿಸಲಾದ ಆಯುಧ, ವಿಷ್ಣುಮೂರ್ತಿ ದೈವದ ಎರಡು ಆಯುಧಗಳು, ತೊಂಡಚ್ಚಮ್ಮಾರ್ ದೈವದ ಆಯುಧ, ಹಿತ್ತಾಳೆಯ ಮೂರು ಪಾತ್ರೆಗಳು, 25 ಕಾಲುದೀಪಗಳು, ಚೆಂಬು, ಕಾಣಿಕೆ ಹುಂಡಿ, ವೆಂಕಟ್ರಮಣ ದೇವರ ಮುಡಿಪು ಕಳವಿಗೀಡಾಗಿದೆ.
ಕಾಣಿಕೆ ಹುಂಡಿಯಲ್ಲಿ ಸುಮಾರು 1 ಸಾವಿರ ರೂಪಾಯಿ, ಮುಡಿಪಿನಲ್ಲಿ ಸುಮಾರು 15 ಸಾವಿರ ರೂಪಾಯಿಗಳಿತ್ತೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಜು. 21 ರ ಸಂಜೆ ಕ್ಷೇತ್ರದಲ್ಲಿ ದೀಪ ಹಚ್ಚಲು ಹೋದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ತರವಾಡು ಕ್ಷೇತ್ರ ಹಾಗೂ ತರವಾಡು ಮನೆಯ ಬೀಗ ಮುರಿದಿರುವುದು ಕಂಡುಬಂದಿದೆ.
ಈ ಬಗ್ಗೆ ಸೇವಾ ಸಮಿತಿ ಕಾರ್ಯಕಾರಿ ಸದಸ್ಯ ಮನೋಹರ್ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಕಳ್ಳರ ಪತ್ತೆಗಾಗಿ ತನಿಖೆ ತೀವ್ರಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.