ಮಂಗಳೂರು: ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವುದಕ್ಕೆ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದ್ದು ಅರೆಸ್ಟ್ ವಾರೆಂಟ್ ಇರುವುದರಿಂದ ಹೇಳಿದಂತೆ ಕೇಳದಿದ್ದಲ್ಲಿ ತೊಂದರೆ ನೀಡುವುದಾಗಿ ತಿಳಿಸಿ 30.65 ಲಕ್ಷ ರೂ. ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಬರ್ಕೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರಿಗೆ ಅ. 19ರಂದು ಅಪರಿಚಿತ ವ್ಯಕ್ತಿಯೊಬ್ಬಕರೆ ಮಾಡಿದ್ದು, ನಿಮ್ಮ ಮೊಬೈಲ್ ನಂಬರ್ ಮೂಲಕ ವಂಚನೆ ಪ್ರಕರಣಗಳು ನಡೆದಿವೆ. ಮುಂಬಯಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಈ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಬಯಿನ ಸಹಾರ ಪೊಲೀಸ್ ಠಾಣೆಯಿಂದ ಕರೆ ಬರುವುದಾಗಿ ತಿಳಿಸಿದ್ದಾರೆ. ಅದೇ ದಿನ ಬೆಳಗ್ಗೆ 11 ಗಂಟೆ ವೇಳೆಗೆ ಇನ್ನೋರ್ವ ಅಪರಿಚಿತ ವ್ಯಕ್ತಿ ಅವರ ಮೊಬೈಲ್ಗೆ ವಾಟ್ಸಾಪ್ ವೀಡಿಯೋ ಕಾಲ್ ಮಾಡಿದ್ದಾನೆ. ಆತ ಪೊಲೀಸ್ ಯೂನಿಫಾರಂನಲ್ಲಿದ್ದ. ತನ್ನ ಹೆಸರು ಮನೋಜ್ ಕುಮಾರ್ ಎಂದು ತಿಳಿಸಿದ್ದಾನೆ. ವಿವೇಕ ದಾಸ್ ಎಂಬ ವ್ಯಕ್ತಿ ಮುಂಬಯಿನ ಎಸ್ಬಿಐ ಬ್ಯಾಂಕ್ ನಲ್ಲಿ ನಿಮ್ಮ ಹೆಸರಿನಲ್ಲಿ ಖಾತೆ ತೆರೆದು ಅವ್ಯಹಾರದ ಹಣದಲ್ಲಿ 38 ಲಕ್ಷ ರೂ. ಕಮಿಷನ್ ನಿಮಗೆ ನೀಡಿದ್ದಾನೆ. ಆತನನ್ನು ದಸ್ತಗಿರಿ ಮಾಡುವಾಗ ಈ ಬಗ್ಗೆ ಒಪ್ಪಿಕೊಂಡಿರುವುದಾಗಿ ವಿವರಿಸಿದ್ದಾನೆ. ದೂರುದಾರರು ನಿಮ್ಮ ಹೆಸರಿನಲ್ಲಿರುವ ఎల్ల ಖಾತೆಗಳನ್ನು ಸ್ಥಗಿತಗೊಳಿಸುವುದಾಗಿ ಬೆದರಿಸಿ, ಅರೆಸ್ಟ್ ವಾರಂಟ್ ಇರುವುದರಿಂದ ಹೇಳಿದ ಹಾಗೆ ಕೇಳದಿದ್ದಲ್ಲಿ ವಿವೇಕ್ದಾಸ್ ಕಡೆಯವರು ಬಂದು’ ತೊಂದರೆ ನೀಡುತ್ತಾರೆಎಂದು ತಿಳಿಸಿದ್ದ. ಇದರಿಂದ ಗಾಬರಿಗೊಂಡ ದೂರುದಾರರು ಅ. 21ರಿಂದ 23ರ ವರೆಗೆ ಹಂತ ಹಂತವಾಗಿ 30.65 ಲಕ್ಷ ರೂ. ಅನ್ನು ಆತ ಹೇಳಿದ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಬಳಿಕ ತಾನು ಮೋಸ ಹೋಗಿರುವುದಾಗಿ ತಿಳಿದುಬಂದಿದ್ದು, ದೂರಿನಲ್ಲಿ ಈ ಬಗ್ಗೆ ವಿವರಿಸಿದ್ದಾರೆ.