ಮಂಗಳೂರು: ನಗರದ ಕೆಂಜಾರಿನಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಇ-ಸಿಗರೇಟ್ ಅನ್ನು ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಡಿಸೆಂಬರ್ 1ರಂದು IX832/IX814 ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಕೇರಳದ ಕಾಸರಗೋಡಿನ ನಿವಾಸಿಗಳಾದ ಇಬ್ಬರು ಪ್ರಯಾಣಿಕರು ಅನುಮಾನಾಸ್ಪದವಾಗಿ ವಿಮಾನ ನಿಲ್ದಾಣದಲ್ಲಿ ವರ್ತಿಸಿದ್ದರು. ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಮಗ್ಲಿಂಗ್ ಬೆಳಕಿಗೆ ಬಂದಿದೆ. ಇಬ್ಬರಿಂದ ಅಕ್ರಮ ಸಾಗಾಟದ ಚಿನ್ನ ಮತ್ತು ಇ-ಸಿಗರೇಟ್ ವಶಪಡಿಸಲಾಗಿದೆ. ಓರ್ವ ಪ್ರಯಾಣಿಕನಿಂದ 24ಕ್ಯಾರಟ್ ಶುದ್ಧತೆಯ ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈತನಿಂದ 625ಗ್ರಾಂ ತೂಕದ 48,75,000 ರೂಪಾಯಿ ಮೌಲ್ಯದ ಚಿನ್ನ ವಶಪಡಿಸಲಾಗಿದೆ. ಇನ್ನೊರ್ವ ಪ್ರಯಾಣಿಕನಿಂದ 1,41,134 ರೂಪಾಯಿ ಮೌಲ್ಯದ ಇ-ಸಿಗರೇಟ್‌ಗಳನ್ನು ವಶಪಡಿಸಲಾಗಿದೆ.