ಮಂಗಳೂರು: ನಗರದ ಉಳ್ಳಾಲ ಠಾಣಾ ವ್ಯಾಪ್ತಿಯ ಜ್ಯುವೆಲ್ಲರಿ ದರೋಡೆಗೆ ಯತ್ನಿಸಿದ್ದ ಕುಖ್ಯಾತ ಅಂತಾರಾಜ್ಯ ಸಾಹೇಬ್ ಗಂಜ್ ದರೋಡೆ ಗ್ಯಾಂಗ್‌ನ 9 ಮಂದಿ ಖದೀಮರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗುಜರಾತ್ ನಿವಾಸಿ ಭಾಸ್ಕರ ಬೆಳ್ಚಪಾಡ(65), ನೇಪಾಲ ದೇಶದ ದಿನೇಶ್ ರಾವಲ್(38) ಬಿಸ್ತ ರೂಪ್ ಸಿಂಗ್ (34),ಕೃಷ್ಣ ಬಹದ್ದೂರ್ ಬೋಗಟಿ (41), ಜಾರ್ಖಂಡ್ ನ ಮೊಹಮ್ಮದ್ ಜಾಮೀಲ್ ಶೇಖ್(29), ಇಂಜಮಾಮ್ ಉಲ್ ಹಕ್(27), ಇಮ್ದದುಲ್ ರಝಾಕ್ ಶೇಖ್, (32),ಬಿವುಲ್ ಶೇಖ್ (31) ಇಮ್ರಾನ್ ಶೇಖ್ (30) ಬಂಧಿತ ದರೋಡೆಕೋರರು.
ನಗರದ ತೊಕ್ಕೊಟ್ಟು ಮಂಚಿಲದಲ್ಲಿನ ಮನೆಯೊಂದರಲ್ಲಿ ಉತ್ತರ ಭಾರತದ ಕುಖ್ಯಾತ “ ಸಾಹೇಬ್ ಗಂಜ್ ದರೋಡೆ ಗ್ಯಾಂಗ್ ” ನ ವ್ಯಕ್ತಿಗಳು ವಾಸವಿತ್ತು. ಈ ಗ್ಯಾಂಗ್ ತೊಕ್ಕೊಟ್ಟಿನ ಜ್ಯುವೆಲ್ಲರಿ ಅಂಗಡಿಯನ್ನು ಕನ್ನ ಕೊರೆದು ದರೋಡೆಗೆ ಸಂಚು ರೂಪಿಸಿದೆ ಎಂಬ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸ್ ತಂಡ ದಾಳಿ ನಡೆಸಿ 9 ಮಂದಿಯನ್ನು ಬಂಧಿಸಿದ್ದಾರೆ.
ಸೂಪರ್ ಗೋಲ್ಡ್ & ಡೈಮಂಡ್ಸ್ ಜ್ಯುವೆಲ್ಲರಿಯನ್ನು ದರೋಡೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ಗ್ಯಾಂಗ್ ದರೋಡೆಗೆ ಗ್ಯಾಸ್ ಕಟ್ಟರ್, ಆಕ್ಸಿಜನ್ ಸಿಲಿಂಡರ್, ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟ್ಟಿಂಗ್ ನೋಝಲ್, ಕಟ್ಟಿಂಗ್ ಹೋಸ್ ಪೈಪ್, ಲೆದರ್ ಹ್ಯಾಂಡ್ ಗ್ಲೌಸ್, ಕಬ್ಬಿಣದ ರಾಡ್, ತಲವಾರು, ಹ್ಯಾಕ್ಸೋ ಬ್ಲೇಡ್, ಹ್ಯಾಮರ್, ಸ್ಕ್ರೂಡ್ರೈವರ್, ಮೆಣಸಿನ ಹುಡಿ, ನೈಲಾನ್ ಹಗ್ಗ ಹಾಗೂ ಇತರ ಹಲವಾರು ಸೊತ್ತುಗಳನ್ನು ಇವರು ಶೇಖರಿಸಿಕೊಂಡಿದ್ದರು.
ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಈ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 2,90,000ರೂ. ಎಂದು ಅಂದಾಜಿಸಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.