ಬೆಳ್ತಂಗಡಿ: ಕಳೆದ ತಾಲೂಕಿನ ಒಂದಲ್ಲ ಒಂದು ಕಾಡಾನೆಗಳ ಹಾವಳಿ ಸಾಮಾನ್ಯವಾಗಿದೆ. ತಾಲ್ಲೂಕಿನ ಚಾರ್ಮಾಡಿಯ ತೋಟ ಒಂದರಲ್ಲಿ ಕಾಣಿಸಿಕೊಂಡಿದ್ದ ಆನೆ ಬಳಿಕ ಮುಂಡಾಜೆ, ಪಟ್ರಮೆ, ಧರ್ಮಸ್ಥಳ, ಕಲ್ಮಂಜ ಮೊದಲಾದ ಗ್ರಾಮಗಳಲ್ಲಿ ಓಡಾಟ ನಡೆಸಿತ್ತು.
ಧರ್ಮಸ್ಥಳ ದೊಂಡೋಲೆ ಹಾಗೂ ನೀರಚಿಲುಮೆ ಸಮೀಪ ಕಾಡನೆಯನ್ನು ನೋಡಿದ ಜನರು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಆನೆಯನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ನಡೆಸಿದ್ದರು. ಅಲ್ಲಿಂದ ಹೋದ ಒಂಟಿಸಲಗ ಆ ಬಳಿಕ ಶುಕ್ರವಾರ ಬೆಳಾಲು, ಬಂದಾರು ಮೊದಲಾದೆಡೆ ಒಂಟಿಸಲಗ ಸುತ್ತಾಡಿ ನಾಳ ಸನಿಹದ ಕಾಡಿನತ್ತ ಹೋಗಿ ಕೊಯ್ಯರು, ಕಲಾಯಿ ಮೊದಲಾದ ಸ್ಥಳಗಳಲ್ಲಿ ಓಡಾಟ ನಡೆಸಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಸರದಲ್ಲಿ ಪರಿಶೀಲನೆ ನಡೆಸಿ ಸ್ಥಳೀಯರಿಗೆ ಮುಂಜಾಗ್ರತೆ ಕೈಗೊಳ್ಳುವಂತೆ ಸೂಚಿಸಿ ಪಟಾಕಿಗಳನ್ನು ನೀಡಿದ್ದು ಆನೆ ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಕಾಡಾನೆ ಮನಬಂದಂತೆ ಜನವಸತಿ ಪ್ರದೇಶಗಳ ನಡುವೆ ಓಡಾಟ ನಡೆಸುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ.