ಮಡಿಕೇರಿ: ಸ್ಕೂಟಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸಾವನ್ನಪ್ಪಿರುವ ದುರ್ಘಟನೆ ಕೊಯನಾಡು ಸಮೀಪದ ಚಡಾವು ಎಂಬಲ್ಲಿ ನಡೆದಿದೆ. ನೆಲ್ಲಿಹುದಿಕೇರಿ ಗ್ರಾಮದಲ್ಲಿ ಚಿನ್ನಾಭರಣಗಳ ಕೆಲಸ ಮಾಡುತ್ತಿದ್ದ ಚಿದಾನಂದ ಆಚಾರ್ಯ ಮತ್ತು ನಳಿನಿ ದಂಪತಿ ಸಾವನ್ನಪ್ಪಿರುವ ದುರ್ದೈವಿಗಳು.
ಚಿದಾನಂದ ಆಚಾರ್ಯ (47) ಎಂಬವರು ತನ್ನ ಸ್ಕೂಟಿ ಸಂಖ್ಯೆ (ಕೆಎ 12-ಡಬ್ಲು 7708)ಯಲ್ಲಿ ತನ್ನ ಪತ್ನಿ ನಳಿನಿ (40) ಅವರೊಂದಿಗೆ ಮಂಗಳೂರಿನಲ್ಲಿ ನಡೆಯ ಬೇಕಾಗಿದ್ದ ಉಪನಯನ ಕಾರ್ಯಕ್ಕೆಂದು ತೆರಳುತ್ತಿರುವ ಸಂದರ್ಭ ಕಂಟೈನರ್ ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಲಾರಿಯು ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿ ಚಾಲನೆ ಮಾಡುತ್ತಿದ್ದ ಚಿದಾನಂದ ಆಚಾರ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಪತ್ನಿ ನಳಿನಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೃತ ಚಿದಾನಂದ ಆಚಾರ್ಯ ನೆಲ್ಲಿಹುದಿಕೇರಿ ಗ್ರಾಮದ ಮುಖ್ಯ ರಸ್ತೆಯ ಅಂಗಡಿಯೊಂದಲ್ಲಿ ಚಿನ್ನಾಭರಣಗಳನ್ನು ರಿಪೇರಿ ಹಾಗೂ ತಯಾರಿಸುವ ಕೆಲಸವನ್ನು ಮಾಡಿಕೊಂಡಿದ್ದರು. ಪತ್ನಿ ನಳಿನಿ ಸಿದ್ದಾಪುರ ಸಂತ ಅನ್ನಮ್ಮ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.
ಮಂಗಳೂರಿನಲ್ಲಿ ನಡೆಯುವ ಉಪನಯನ ಕಾರ್ಯಕ್ಕೆ ಒಂದು ದಿನ ಮುಂಚಿತವಾಗಿ ತೆರಳಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಕೆಲಸ ಕಾರ್ಯಗಳಿಗೆ ಸಹಕಾರ ನೀಡಲು ಸಂತೋಷದಿಂದ ತೆರಳುವ ಸಂದರ್ಭ ಯಮನಂತೆ ಬಂದ ಲಾರಿ ಅಪ್ಪಳಿಸಿ ದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ.