ಕಸ್ಟಮ್ಸ್ ಅಧಿಕಾರಿಗಳು 1 ಕೆ.ಜಿ. 625 ಗ್ರಾಂ ಚಿನ್ನ ವಶಕ್ಕೆ ಪಡೆದ ಘಟನೆ ಮಂಗಳೂರು ಏರ್ ಪೋರ್ಟ್ ನಲ್ಲಿ ನಡೆದಿದೆ.
ಫೆಬ್ರವರಿ 1ರಿಂದ 15ರವರೆಗೆ ನಡೆಸಿದ ಕಾರ್ಯಾಚರಣೆಗಳಲ್ಲಿ ಅಧಿಕಾರಿಗಳು ದುಬೈ ಮತ್ತು ಬಹ್ರೇನ್ ನಿಂದ ಆಗಮಿಸಿದ ಐವರು ಪುರುಷ ಪ್ರಯಾಣಿಕರಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಈ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ವಶಪಡಿಸಿಕೊಳ್ಳಲಾದ ಚಿನ್ನದ ಮಾರುಕಟ್ಟೆ ಮೌಲ್ಯ 91 ಲಕ್ಷದ 35 ಸಾವಿರದ 850 ರೂಪಾಯಿ ಆಗಿದೆ. ಚಿನ್ನ ಮಾತ್ರವಲ್ಲದೇ ಭಾರತೀಯ ರೂಪಾಯಿ 6 ಲಕ್ಷದ 54 ಸಾವಿರದ 750 ರೂಪಾಯಿ ಮೌಲ್ಯದ ವಿದೇಶಿ ನೋಟುಗಳನ್ನು ಓರ್ವ ಪ್ರಯಾಣಿಕನಿಂದ ವಶಕ್ಕೆ ಪಡೆಯಲಾಗಿದೆ.
ಚಿನ್ನವನ್ನು ಪೇಸ್ಟ್ ರೂಪದಲ್ಲಿ ಘನ ಗಮ್ ನೊಂದಿಗೆ ಬೆರೆಸಿ ಅಂಡಾಕಾರದ ಪ್ಯಾಕೆಟ್ ಗಳಾಗಿ ಮಾಡಿ ಗುದನಾಳದಲ್ಲಿ ಮರೆಮಾಚಿ, ಟ್ರಾಲಿ ಬ್ಯಾಗ್ ನ ಹ್ಯಾಂಡಲ್ ನಲ್ಲಿ ಮರೆಮಾಚಿದ್ದು, ರಟ್ಟಿನ ಪೆಟ್ಟಿಗೆಯಲ್ಲಿ ಪೇಸ್ಟ್ ರೂಪದಲ್ಲಿ ಮರೆಮಾಚಿದ್ದು ಸೇರಿ ವಿವಿಧ ರೂಪದಲ್ಲಿ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.