ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 2024ರಲ್ಲಿ ಡ್ರಗ್ಸ್ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿ ಒಟ್ಟು 1,090 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಉಡುಪಿ ಜಿಲ್ಲೆಯಲ್ಲಿ 2024ರಲ್ಲಿ ಮಾದಕ ವಸ್ತು ಮಾರಾಟ, ಸೇವನೆಗೆ ಸಂಬಂಧಿಸಿ ಈ ವರ್ಷ 116 ಪ್ರಕರಣ ದಾಖಲಾಗಿರುತ್ತದೆ.
ಡ್ರಗ್ಸ್ ಮಾರಾಟಕ್ಕೆ ಸಂಬಂಧಿಸಿ 88, ಸೇವನೆಗೆ ಸಂಬಂಧಿಸಿ 1,002 ಪ್ರಕರಣಗಳು ದಾಖಲಾಗಿವೆ. ಡ್ರಗ್ಸ್ ಮಾರಾಟಕ್ಕೆ ಸಂಬಂಧಿಸಿ 157 ಹಾಗೂ ಸೇವನೆಗೆ ಸಂಬಂಧಿಸಿ 1,211 ಮಂದಿ ಸಹಿತ ಒಟ್ಟು 1,372 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಈ ಪೈಕಿ ನಾಲ್ವರು ವಿದೇಶಿಗರಾಗಿದ್ದಾರೆ. ಇದು ಹಿಂದಿನ ಎಲ್ಲ ವರ್ಷಗಳಿಗಿಂತಲೂ ಅಧಿಕವಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಮಾಹಿತಿ ನೀಡಿದ್ದಾರೆ.
2023ಕ್ಕೆ ಹೋಲಿಸಿದಾಗ ಡ್ರಗ್ಸ್ ಸೇವನೆ ಪ್ರಕರಣಗಳಲ್ಲಿ ಶೇ.62ರಷ್ಟು ಏರಿಕೆಯಾಗಿದೆ. ಕಾವೂರು, ಉಳ್ಳಾಲ, ಉತ್ತರ ಠಾಣೆ, ಕಂಕನಾಡಿ ನಗರ ಮತ್ತು ಕೊಣಾಜೆ ಠಾಣೆಗಳ ವ್ಯಾಪ್ತಿಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಮೂವರು ಡ್ರಗ್ಸ್ ಮಾರಾಟಗಾರರ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 28 ಮಂದಿಯನ್ನು ಗಡೀಪಾರು ಮಾಡಲಾಗಿದೆ. 123 ಮಂದಿಯಿಂದ ಬಾಂಡ್ ಪಡೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
2024ರಲ್ಲಿ 191.073 ಗಾಂಜಾ, 7.437 ಕೆಜೆ ಸಿಂಥೆಡಿಕ್ ಡ್ರಗ್ಸ್ ಸಹಿತ 7,51,73,000 ರೂ. ಮೌಲ್ಯದ ಡ್ರಗ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 2022ರಲ್ಲಿ 59,60,000 ರೂ. ಮೌಲ್ಯದ ಹಾಗೂ 2023ರಲ್ಲಿ 1,71,12,000 ರೂ. ಮೌಲ್ಯದ ಡ್ರಗ್ಸ್ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.314ರಷ್ಟು ಹೆಚ್ಚು ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.
ಬಂದರು ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಮ್ಮದ್ ಕಮಿಲ್ ಪ್ರಕರಣ ಸಾಬೀತಾಗಿ 6 ತಿಂಗಳು ಶಿಕ್ಷೆ ಮತ್ತು 10,000 ರೂ. ದಂಡ, ಪಾಂಡೇಶ್ವರ ಠಾಣೆ ವ್ಯಾಪ್ತಿಯ ಮೊಹಮ್ಮದ್ ರಮೀಜ್‌ಗೆ 6 ತಿಂಗಳು ಶಿಕ್ಷೆ ಮತ್ತು10,000 ರೂ. ದಂಡ, ಕೊಣಾಜೆ ಠಾಣಾ ವ್ಯಾಪ್ತಿಯ ಅಬ್ದುಲ್ ರಹಮಾನ್, ಅಬ್ದುಲ್ ಖಾದರ್‌ಗೆ 6 ತಿಂಗಳ ಶಿಕ್ಷೆ, 5,000 ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಸುರತ್ಕಲ್ ಠಾಣೆ ವ್ಯಾಪ್ತಿಯ ವೈಶಾಕ್‌ಗೆ 6 ತಿಂಗಳ ಶಿಕ್ಷೆ, 10 ಸಾ. ರೂ. ದಂಡ, ಬರ್ಕೆ ಪೊಲೀಸ್ ಠಾಣೆಯ ದೀಕ್ಷಿತ್ ನಾಯಕ್, ಕಾರ್ತಿಕ್ ಜೆ.ಗೆ 1 ವರ್ಷ ಶಿಕ್ಷೆ, 1,000 ರೂ. ದಂಡ ವಿಧಿಸಿ ಕೋರ್ಟ್ ತೀರ್ಪು ಪ್ರಕಟಿಸಿದೆ.
120 ಮಂದಿ ವಿಚಾರಣಾಧೀನ ಕೈದಿಗಳನ್ನು ತಪಾಸಣೆಗೊಳಪಡಿಸಿದಾಗ 40 ಮಂದಿ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಇನ್ನು ಉಡುಪಿಯಲ್ಲಿ 2024ರಲ್ಲಿ ಮಾದಕ ವಸ್ತು ಮಾರಾಟ, ಸೇವನೆಗೆ ಸಂಬಂಧಿಸಿ 2024ರಲ್ಲಿ 116 ಪ್ರಕರಣಗಳು ದಾಖಲಾಗಿವೆ. 28 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 25 ಕೆಜಿ 457 ಗ್ರಾಂ ಗಾಂಜಾ ಮತ್ತು 271.26 ಗ್ರಾಂ ಮೆಥಾ ಎಂಫಟಮೈನ್ ಡ್ರಗ್ಸ್ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಕಳೆದ ವರ್ಷ 18 ಕೆಜಿ 410 ಗ್ರಾಂ ಗಾಂಜಾ ಮತ್ತು 98 ಗ್ರಾಂ ಎಂಡಿಎಂಎ ಸ್ವಾಧೀನಪಡಿಸಿಕೊಳ್ಳಲಾಗಿತ್ತು ಎಂದು ಉಡುಪಿ ಎಸ್‌ಪಿ ಡಾ| ಕೆ.ಅರುಣ್ ತಿಳಿಸಿದ್ದಾರೆ.