ಮಂಗಳೂರು: ಸೈಬರ್ ವಂಚನೆ ತಡೆಯಲು ಯತ್ನಿಸಿದಷ್ಟು, ಸೈಬರ್ ಖದೀಮರು ಹೊಸ ವಿಧಾನದ ಮೂಲಕ ತಮ್ಮ ವಂಚನಾ ಕೃತ್ಯವನ್ನು ಮುಂದುವರಿಸುತ್ತಿದ್ದಾರೆ. ಇದೀಗ ವಂಚಕರು ”ರ್ಯಾಟ್” ಸಿಸ್ಟಮ್ ದುರ್ಬಳಕೆ ಮಾಡಿ ಬ್ಯಾಂಕ್ ಗ್ರಾಹಕರ ಖಾತೆಗೆ ಕನ್ನ ಹಾಕಲು ಆರಂಭಿಸಿದ್ದಾರೆ.
ಹೌದು… ರ್‍ಯಾಟ್ (ರಿಮೋಟ್ ಆ್ಯಕ್ಸೆಸ್ ಟೂಲ್ಸ್) ಬಳಸಿಕೊಂಡು ಎಪಿಕೆ ಫೈಲ್/ಆ್ಯಂಡ್ರಾಯ್ಡ್ ಆ್ಯಪ್ ಸಿದ್ದಪಡಿಸಿ ವಾಟ್ಸ್ಆ್ಯಪ್/ಟೆಕ್ಸ್ಟ್ ಮೆಸೇಜ್ ಮೂಲಕ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗಳಿಗೆ ಎಪಿಕೆ ಫೈಲ್ ಅಥವಾ ಲಿಂಕ್‌ಅನ್ನು ಕಳುಹಿಸಿ ಕೊಡುತ್ತಾರೆ. ಅದನ್ನು ತೆರೆದರೆ ಮೊಬೈಲ್‌ಗೆ ಬರುವ ಎಲ್ಲ ಟೆಕ್ಸ್ಟ್ ಮೆಸೇಜ್‌ಗಳು ವಂಚಕರ ಮೊಬೈಲ್ ಫೋನ್‌ಗಳಿಗೆ ‘ಆಟೋಮ್ಯಾಟಿಕಲಿ ಮೆಸೇಜ್ ಫಾರ್ವರ್ಡಿಂಗ್’ ಆಗುತ್ತದೆ. ಆ ಮೂಲಕ ವಂಚಕರು ಸುಲಭವಾಗಿ ಒಟಿಪಿ ಪಡೆದುಕೊಂಡು ಇಂಟರ್‌ನೆಟ್ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಅಳವಡಿಸಿಕೊಂಡು ಕ್ಷಣ ಮಾತ್ರದಲ್ಲಿ ಅವರ ಖಾತೆಗಳಿಗೆ ಹಣ ವರ್ಗಾಯಿಸಿಕೊಳ್ಳುತ್ತಾರೆ. ಆದ್ದರಿಂದ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳಿಗೆ ಬರುವ ಎಪಿಕೆ ಫೈಲ್ ಅಥವಾ ಆಂಡ್ರಾಯ್ಡ್ ಆ್ಯಪ್‌ಗಳ ಲಿಂಕ್ ಗಳನ್ನು ಯಾರೂ ಕ್ಲಿಕ್ ಮಾಡಬಾರದು. ಒಂದು ವೇಳೆ ಅಚಾನಕ್ ಆಗಿ ವಂಚಕರು ಕಳುಹಿಸಿರುವ ಎಪಿಕೆ ಫೈಲ್ ಅನ್ನು ಕ್ಲಿಕ್ ಮಾಡಿದರೆ ತಕ್ಷಣ ನಿಮ್ಮ ಮೊಬೈಲ್ ಅನ್ನು ಏರೋಪ್ಲೇನ್ ಮೋಡ್‌ಗೆ ಹಾಕಬೇಕು ಅಥವಾ ತಕ್ಷಣ ಸ್ವಿಚ್ ಆಫ್ ಮಾಡಬೇಕು. ಬಳಿಕ ತಮ್ಮ ಬ್ಯಾಂಕ್‌ಗೆ ಸಂಪರ್ಕಿಸಿ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಬೇಕು. ಎಪಿಕೆ ಫೈಲ್ ಗಳನ್ನು ಇನ್‌ಸ್ಟಾಲ್ ಮಾಡಿದರೆ ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ಮಾತ್ರವಲ್ಲ ನಿಮ್ಮ ಖಾಸಗಿತನಕ್ಕೂ ಕುತ್ತು ಎಂದು ಸೈಬರ್ ತಜ್ಞರು ಹೇಳುತ್ತಾರೆ.