ಬೆಂಗಳೂರು: ಚಂದ್ರಯಾನ-3ಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಂತ ಸ್ಥಳವನ್ನು ಶಿವಶಕ್ತಿ ಎಂಬುದಾಗಿ ಕರೆಯಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದಾರೆ.
ಇಂದು ಬೆಂಗಳೂರಿನ ಪೀಣ್ಯಾದಲ್ಲಿರುವಂತ ಇಸ್ರೋ ಕಮಾಂಡಿಂಗ್ ಸೆಂಟರ್ ಗೆ ಭೇಟಿ ನೀಡಿದ ಬಳಿಕ, ವಿಜ್ಞಾನಿಗಳ ಜೊತೆಗಿನ ಸಂವಾದದಲ್ಲಿ ಮಾತನಾಡಿದಂತ ಅವರು, ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಸಂತೋಷ ತಂದಿದೆ.
ಇಸ್ರೋ ವಿಜ್ಞಾನಿಗಳ ಸಾಧನೆ ಇಡೀ ವಿಶ್ವವೇ ಕೊಂಡಾಡಿದೆ. ವಿಜ್ಞಾನಿಗಳ ಸಾಧನೆ ನೆನೆದು ಪ್ರಧಾನಿ ಭಾವುಕರಾಗಿ ನುಡಿದರು.
ನಿಮ್ಮ ಧೈರ್ಯ, ಶಕ್ತಿ, ಸಾಮರ್ಥ್ಯಗಳಿಗೆ ನನ್ನ ನಮನಗಳು. ದೇಶದ ಘನತೆಯನ್ನು ಉತ್ತುಂಗಕ್ಕೆ ಏರಿಸಿದ್ದಕ್ಕೆ ಧನ್ಯವಾದಗಳು ಎಂದರು.
ವಿಶ್ವದ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಭಾರತ ಪರಿಹಾರ ಕಂಡಿದೆ. ಪ್ರತಿಯೊಬ್ಬ ವಿಜ್ಞಾನಿಗೂ ನನ್ನದೊಂದು ಸಲ್ಯೂಟ್. ಸದ್ಯ ಭಾರತ ಚಂದ್ರನ ಮೇಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾರತದ ವೈಜ್ಞಾನಿಕ ಸಾಧನೆಯನ್ನು ವಿಶ್ವವೇ ಕೊಂಡಾಡುತ್ತಿದೆ. ಇಸ್ರೋ ವಿಜ್ಞಾನಿಗಳ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ನನ್ನ ತನು, ಮನ ಸಂತೋಷದಿಂದ ಕೂಡಿದೆ. ಸಮರ್ಪಣಾ ಮನೋಭಾವ, ಕಠಿಣ ಪರಿಶ್ರಮಕ್ಕೆ ನನ್ನ ಸೆಲ್ಯೂಟ್ ಎಂಬುದಾಗಿ ತಿಳಿಸಿದರು.
ಯಾವ ದಶವೂ ಮಾಡಿರದ ಸಾಧನೆ ನಾವು ಮಾಡಿದ್ದೇವೆ. ದೊಡ್ಡ ಅಗ್ನಿ ಪರೀಕ್ಷೆಯಲ್ಲಿ ನಾವು ಪಾಸ್ ಆಗಿದ್ದೇವೆ. ಚಂದ್ರನ ಅಂಗಳದಲ್ಲಿ ಪ್ರಜ್ಞಾನ್ ಪರಾಕ್ರಮ ಮಾಡಿದೆ. ನಿಮ್ಮೆಲ್ಲರ ಈ ಸಾಧನೆ ಇತರರಿಗೆ ಸ್ಪೂರ್ತಿಯಾಗಿದೆ ಎಂದು ಹೇಳಿದರು.
ನೀವೆಲ್ಲರೂ ಸೇರಿ ಭಾರತದ ಕನಸು ನನಸು ಮಾಡಿದ್ದೀರಿ. ನಿಮ್ಮ ಸಾಧನೆ ಎಷ್ಟೇ ಕೊಂಡಾಡಿದರೂ ಅದು ಕಡಿಮೆ. ಭಾರತದ ವಿಜ್ಞಾನದ ಶಕ್ತಿ ಇಡೀ ವಿಶ್ವಕ್ಕೆ ಮಾದರಿ. ವಿಕ್ರಮ್ ಲ್ಯಾಂಡರ್ ಮೂಲಕ ಇತಿಹಾಸ ಸೃಷ್ಠಿಸಲಾಗಿದೆ ಎಂದು ತಿಳಿಸಿದರು.
ಚಂದ್ರನ ಮೇಲೆ ಪ್ರಜ್ಞಾನ್ ಪರಾಕ್ರಮ ಕಂಡು ಖುಷಿಯಾಗಿದೆ. ದೇಶದ ಘನತೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ತಿದ್ದೀರಿ ಎಂಬುದಾಗಿ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನೆ ಸಲ್ಲಿಸಿದರು.