ಮಂಗಳೂರು: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಮಂಗಳೂರು ದಸರಾ ಶೋಭಾಯಾತ್ರೆ ಇಲ್ಲದೆ ಶಾರದಾ ಮಾತೆ, ನವದುರ್ಗೆಯರ ವಿಸರ್ಜನೆಯು ನಡೆದಿತ್ತು. ಈ ಬಾರಿ ಮತ್ತೆ ವೈಭವದ ಶೋಭಾಯಾತ್ರೆಯ ಕಳೆಗಟ್ಟಿದ್ದು, ತಾಯಿ ಶಾರದೆ, ನವದುರ್ಗೆಯರ ಸಹಿತ, ಮಹಾಗಣಪತಿಯ ಮೃಣ್ಮಯ ಮೂರ್ತಿಗಳ ಶೋಭಾಯಾತ್ರೆ.
ಈ ಮೃಣ್ಮಯ ಮೂರ್ತಿಗಳನ್ನು ಮಂಗಳೂರು ನಗರದಾದ್ಯಂತ ಶೋಭಾಯಾತ್ರೆಯ ಮೂಲಕ ಕೊಂಡೊಯ್ದು ಮುಂಜಾನೆ ವೇಳೆಗೆ ಕುದ್ರೋಳಿ ಶ್ರೀಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು. ವಿವಿಧ ಕಲಾ ತಂಡಗಳು, ಟ್ಯಾಬ್ಲೊಗಳು, ಸಂಗೀತ ವಾದ್ಯ ಮೇಳಗಳು, ಮಂಗಳವಾದ್ಯಗಳು, ಭಜನಾ ಸಂಕೀರ್ತನಾ ತಂಡಗಳು, ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾ ತಂಡಗಳು ವೈಭವದ ಶೋಭಾಯಾತ್ರೆಗೆ ಮೆರುಗು ನೀಡಿದವು.
ಶೋಭಾಯಾತ್ರೆ ಸಾಗುವ ದಾರಿಯುದ್ದಕ್ಕೂ ಮಂಗಳೂರು ನಗರದ ರಾಜಬೀದಿಯು ವಿದ್ಯುತ್ ದೀಪಾಲಂಕೃತದಿಂದ ಕಂಗೊಳಿಸುತ್ತಿತ್ತು. ಈ ವೈಭವದ ಶೋಭಾಯಾತ್ರೆಗೆ ಮಂಗಳೂರು ಮಾತ್ರವಲ್ಲದೆ, ಹೊರ ರಾಜ್ಯ, ಹೊರ ದೇಶಗಳಿಂದಲೂ ಬಂದಿರುವ ಸಾವಿರ ಸಾವಿರ ಮಂದಿ ಸಾಕ್ಷಿಯಾದರು.